ಹಾವೇರಿ:ಭೀಕರ ಅಪಘಾತದಲ್ಲಿ ಗೂಡ್ಸ್ ಲಾರಿ ಪಲ್ಟಿ ಹೊಡೆದು ಚಾಲಕನಿಗೆ ಕಬ್ಬಿಣದ ಪೈಪ್ ಎದೆಗೆ ಹೊಕ್ಕಿರುವ ಘಟನೆ ಜರುಗಿದೆ. ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಹೂಲಹಳ್ಳಿ ಗ್ರಾಮದ 48 ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ. 27 ವರ್ಷದ ಚಾಲಕ ಶಿವಾನಂದ ಬಡಗಿ ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಲಾರಿಯು 48ನೇ ರಾಷ್ಟ್ರೀಯ ಹೆದ್ದಾರಿಯ ಬಳಿ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಪಲ್ಟಿಯಾಗಿದೆ. ಸರ್ವೀಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ಚಾಲಕನ ಎದೆಯೊಳಗೆ ಹೊಕ್ಕಿದೆ. ರಕ್ತ ಸೋರುತ್ತಿದ್ದರೂ ಚಾಲಕ ದಿಕ್ಕು ತೋಚದೇ ಕುಳಿತು ಬಿಟ್ಟಿದ್ದಾನೆ.
ರಾಷ್ಟ್ರೀಯ ಹೆದ್ದಾರಿಯ ಅಂಬ್ಯುಲೆನ್ಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕದಳದ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಚಾಲಕನ ಎದೆಗೆ ಹೊಕ್ಕಿರುವ ಕಬ್ಬಿಣದ ಪೈಪ್ ಹೊರತೆಗೆಯಲು ಹರಸಾಹಸಪಟ್ಟರು. ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣದ ಪೈಪ್ನ್ನು ತುಂಡರಿಸಿ, ಎದೆಯಲ್ಲಿ ಸಿಕ್ಕಿರುವ ಕಬ್ಬಿಣದ ಪೈಪ್ನೊಂದಿಗೆ ಲಾರಿ ಚಾಲಕನನ್ನು ಕಳುಹಿಸಲಾಯಿತು.
ಎದೆಯಲ್ಲಿ ಸಿಕ್ಕಿ ಹಾಕಿಕೊಂಡ ಕಬ್ಬಿಣದ ಪೈಪ್ ಕಂಡು ಎಲ್ಲರೂ ದಂಗಾಗಿದ್ದರು. 27 ವರ್ಷದ ಚಾಲಕ ಶಿವಾನಂದ ಬಡಗಿ ಎದೆಗೆ ಕಬ್ಬಿಣದ ಪೈಪ್ ಹೊಕ್ಕಿದ್ದರೂ ಎದೆಗುಂದದೆ ಆಸ್ಪತ್ರೆಗೆ ರವಾನಿಸಲು ಸಹಕರಿಸಿದ್ದಾನೆ. ಎದೆಯಲ್ಲಿ ಕಬ್ಬಿಣದ ಪೈಪ್ ಹೊಕ್ಕು ರಕ್ತ ಸುರಿಯುತ್ತಿದ್ದರೂ ಧೈರ್ಯದಿಂದ ಕುಳಿತಿದ್ದ ಲಾರಿ ಚಾಲಕನ ಧೈರ್ಯವಯನ್ನು ಸ್ಥಳೀಯರು ಮೆಚ್ಚಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.