ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸದ್ಭಾವನೆಯೊಂದಿಗೆ ಇರುವಂತಾಗಬೇಕು. ದೇಶದ ಹಿತಕ್ಕಾಗಿ ಸಂವಿಧಾನಾತ್ಮಕ ಕ್ರಮಗಳ ಮೂಲಕ ಸಮಾಜಮುಖಿಯಾಗಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಹಲವಾರು ಮತ-ಪಂಥಗಳು, ಜಾತಿ ಮತ್ತು ಧರ್ಮಗಳನ್ನೊಳಗೊಂಡಿರುವ ಭಾರತ ಇಡೀ ವಿಶ್ವದಲ್ಲಿಯೇ ಮಾನವೀಯ ಮೌಲ್ಯಗಳನ್ನು ಬಳಸಿಕೊಂಡು ಬೆಳವಣಿಗೆಯಲ್ಲಿ ಮಂಚೂಣಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿರುವ ಆತ್ಮಸ್ಥೈರ್ಯ ಮತ್ತು ಶಾಂತಿಯ ಭಾವ. ಎಲ್ಲಾ ಧರ್ಮ, ಭಾಷೆ ಹಾಗೂ ಜನರಲ್ಲಿ ಸೌಹಾರ್ದತೆ ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆ ಮೂಡಿಸಿ ಹಿಂಸಾಚಾರ ತ್ಯಜಿಸುವಂತೆ ಮಾಡುವುದು ಸದ್ಭಾವನಾ ದಿನದ ಉದ್ದೇಶವಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿ ವರ್ಷ ಆಗಸ್ಟ್ 20ರಂದು ಸದ್ಭಾವನಾ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
`ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇಧ-ಭಾವವಿಲ್ಲದೆ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ. ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’ ಎಂಬ ಪ್ರತಿಜ್ಞಾವಿಧಿಯನ್ನು ಎಲ್ಲರೂ ಸ್ವೀಕರಿಸಿದರು.
ಈ ವೇಳೆ ಎಂ.ಎಚ್. ಸೀತಿಮನಿ, ರಮೇಶ ಹಲಗಿಯವರ, ಅಡಿವೆಪ್ಪ ಮೆಣಸಿಗಿ, ರಕ್ಷತ ಎಲ್, ಮಣಿಕಂಠ ಹೂಗಾರ, ಶೇಖಪ್ಪ ಹೊನವಾಡ, ಉದಯ ಮುದೇನಗುಡಿ, ವಿವೇಕ ಅಣಗೌಡ್ರ, ಮಹಾದೇವ ಮ್ಯಾಗೇರಿ, ದುರಗಪ್ಪ ಪಾದಗಟ್ಟಿ, ಮಲ್ಲಯ್ಯ ಹಿರೇವಡೆಯರ, ರವಿ ನಡುವಲಕೆರಿ, ಎನ್.ಬಿ. ಬೇಲೇರಿ, ಕಾವ್ಯಾ ಅರವಟಗಿಮಠ, ನೀಲಪ್ಪ ಚಳ್ಳಮರದ, ಜಮೀಲಾಬೇಗಂ ಬಂಕಾಪೂರ ಸೇರಿದಂತೆ ಇತರರಿದ್ದರು.



