ಬೆಳಗಾವಿ:- ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಸರ್ಕಾರ ಕ್ರಮ ವಹಿಸಲಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಹತ್ತಿರದಲ್ಲಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಸರ್ಕಾರವು ಕ್ರಮವಹಿಸಲಿದೆ. ಈ ಕಾರ್ಖಾನೆಯ ಪುನಶ್ಚೇತನದ ಪ್ರಕ್ರಿಯೆಯು 2022ರಿಂದಲೇ ಆರಂಭವಾಗಿದೆ. 2022-23ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್.ಆರ್.ಓ.ಟಿ. ಆಧಾರದ ಮೇಲೆ ಇದ್ದಲ್ಲಿ, ಯಥಾಸ್ಥಿತಿಯಲ್ಲಿ ಖಾಸಗಿ ಅವರಿಗೆ ಗುತ್ತಿಗೆ ನೀಡಲು 2023ರಲ್ಲಿ ದಿನಪತ್ರಿಕೆಯಲ್ಲಿ ಟೆಂಡರ್ ಕರೆದರೂ ಸಹ ಬಿಡ್ಡುದಾರರು ಆಸಕ್ತಿ ತೋರಲಿಲ್ಲ ಎಂದರು.
ಎರಡನೇ ಬಾರಿಗೆ ಟೆಂಡರ್ ಕರೆದರೂ ಸಹ ಯಾರೊಬ್ಬ ಬಿಡ್ಡುದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಲ್ಲ. ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವನೆಯನ್ನು ಒಳಗೊಂಡಂತೆ ಒಟ್ಟು 6 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಎನ್.ಸಿ.ಡಿ.ಸಿ.ಯಿಂದ ನೆರವನ್ನು ಪಡೆಯುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆಯನ್ನು ನಡೆಸಲಾಗುವುದು ಎಂದರು.



