ವಿಜಯಸಾಕ್ಷಿ ಸುದ್ದಿ, ಗದಗ: ಬಸವಾದಿ ಶರಣರ ವಚನಗಳು ಸಾರ್ವತ್ರಿಕ ಮನ್ನಣೆ ಪಡೆದಿರುವ ಮೌಲ್ಯಗಳಾಗಿದ್ದು, ಸಮಾಜದಲ್ಲಿ ಇವುಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ವಚನಗಳಿಗೆ ಕಾನೂನಿನ ಬಲ ತಂದು ಅವುಗಳನ್ನು ಸಶಕ್ತೀಕರಣಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ನುಡಿದರು.
ಅವರು ಶನಿವಾರ ನಗರದ ತೋಂಟದಾರ್ಯ ಮಠದಲ್ಲಿ ಕನ್ನಡದ ಜಗದ್ಗುರುಗಳು ಹಾಗೂ ಬಸವತತ್ವದ ದಂಡನಾಯಕರಾಗಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 77ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ, ಗ್ರಂಥಗಳ ಬಿಡುಗಡೆ, ವಚನ ಪಾಠಶಾಲೆ ಉದ್ಘಾಟನೆ ಮತ್ತು ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ನಡುವೆ ಇದ್ದರೆ ರಾಜ್ಯ ಸರ್ಕಾರ ವಚನಗಳಿಗೆ ಕಾನೂನಿನ ಬಲ ತುಂಬಲು ಹೊರಟಿರುವ ನಡೆಯನ್ನು ಖಂಡಿತ ಶ್ಲಾಘಿಸುತ್ತಿದ್ದರು. ಬಸವತತ್ವಗಳ ಕಟ್ಟುನಿಟ್ಟಿನ ಪರಿಪಾಲಕರಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ತೋಂಟದಾರ್ಯ ಮಠದ ಜಾತ್ರೆಗೆ ಹೊಸ ಭಾಷ್ಯ ಬರೆದು ಜಾತ್ರೆಗಳನ್ನು ಜನೋಪಯೋಗಿ ಹಾಗೂ ಸಮಾಜಮುಖಿಯಾಗಿ ಆಚರಿಸುವ ಪರಂಪರೆ ಹಾಕಿಕೊಟ್ಟರು. ಪುಸ್ತಕಗಳನ್ನು ಪ್ರಕಟಿಸುವ, ಹಂಚುವ ಮುಖೇನ ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಜಾತ್ರೆಗಳನ್ನು ಸಾಂಸ್ಕೃತಿಕವಾಗಿ ಮಾರ್ಪಡಿಸಿದರು. ಇಂದಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಹ ಅದೇ ಪರಂಪರೆಯನ್ನು ಮುಂದುವರೆಸಿದ್ದು, ಇಂದು ಹೆಸರಾಂತ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕುರಿತ ಗ್ರಂಥಗಳನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರೆತಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಮಾತನಾಡಿ, ಸಿದ್ಧಲಿಂಗ ಶ್ರೀಗಳು ತಮ್ಮ ಸಾಧನೆಗಳೊಂದಿಗೆ ಅಜರಾಮರರಾಗಿದ್ದಾರೆ. ಶ್ರೀಮಠದ ಪೀಠಕ್ಕೆ ಬಂದಾಗಿನಿಂದ ಅವರು ಲಿಂಗೈಕ್ಯರಾಗುವವರೆಗೆ ಅವರ ಸಾಧನೆಗಳು ಅಪರಿಮಿತವಾಗಿದ್ದು, ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದ್ದಾರೆ. ಮುಖ್ಯವಾಗಿ ಬಸವತತ್ವವನ್ನು ವಿಶ್ವದಾದ್ಯಂತ ಪಸರಿಸಿದ ಮಹಾನ್ ಗರಿಮೆ ಶ್ರೀಗಳಿಗೆ ಇದೆ. ಸಿದ್ಧಲಿಂಗ ಶ್ರೀಗಳು ಕೋಟಿಗೊಬ್ಬರಾಗಿದ್ದು, ಇಂಥ ಮಹಾತ್ಮರ ಒಡನಾಟ ದೊರೆತಿದ್ದು ನಮ್ಮ ಸೌಭಾಗ್ಯ ಎಂದರು.
ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕನ್ನಡದ ಜಗದ್ಗುರುಗಳೆಂದೇ ಖ್ಯಾತರಾಗಿದ್ದ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ರೈತಪ್ರೇಮಿಗಳು ಹಾಗೂ ಜಾನಪದ, ಕಲೆ, ಸಂಗೀತ-ಸಾಹಿತ್ಯದ ಪ್ರೋತ್ಸಾಹಕರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ನನ್ನ ಕಾರ್ಯಗಳನ್ನು ಮೆಚ್ಚಿ ಮನಸಾರೆ ಅಭಿನಂದಿಸಿ ಆಶೀರ್ವದಿಸುತ್ತಿದ್ದ ಶ್ರೀಗಳ ಜವಾರಿ ಭಾಷೆ, ಗಟ್ಟಿ ಧ್ವನಿಯನ್ನು ನಾನು ಮರೆಯಲು ಸಾಧ್ಯವಿಲ್ಲ. ಅವರಿಂದ ಅನೇಕ ನುಡಿಮುತ್ತುಗಳನ್ನು, ಭಾಷೆಯ ಪ್ರಯೋಗವನ್ನು ನಾನು ಕಲಿತಿದ್ದೇನೆ ಎಂದರು.
ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ವಚನ ನೃತ್ಯ ಜರುಗಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಡಾ. ಎಂ.ಎ. ಕಲಬುರ್ಗಿ ಅಧ್ಯಯನ ಸಂಸ್ಥೆಯಿನದ ಪ್ರಕಟಗೊಂಡ ‘ತೋಂಟದಾರ್ಯ ಸಂಸ್ಥಾನಮಠ ಸಾಹಿತ್ಯ ಪ್ರಕಟಣೆಗಳು; ತಾತ್ವಿಕ ಸ್ವರೂಪ’, ‘ಮಾಯದಂಥಾ ಬೆಳದಿಂಗಳ’, ‘ಚಲವಾದಿ ಗೌರಮ್ಮನ ಕಥೆಗಳು’ ಗ್ರಂಥಗಳು ಲೋಕಾರ್ಪಣೆಗೊಂಡವು. ತೋಂಟದಾರ್ಯ ಮಠದ `ವಚನ ಪಾಠಶಾಲೆ’ಯ ಉದ್ಘಾಟನೆ ನೆರವೇರಿತು.
ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೈರನಹಟ್ಟಿ ಮಠದ ಶಾಂತಲಿಂಗ ಮಹಾಸ್ವಾಮಿಗಳು, ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು ಸಮ್ಮುಖವಹಿಸಿದ್ದರು.
ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಮಾಜಿ ಸಂಸದರಾದ ಐ.ಜಿ. ಸನದಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷರಾದ ವಿನಾಯಕ ಮಾನ್ವಿ, ಶಶಿ ಸಾಲಿ, ಹೇಮಾ ಪಟ್ಟಣಶೆಟ್ಟಿ, ಗ್ರಂಥಗಳ ಲೇಖಕರಾದ ಶಶಿಧರ ತೋಡಕರ, ವಿದ್ಯಾವತಿ ಅಕ್ಕಿ, ವೆಂಕಟಾಪೂರ ಶರಣರು ಮುಂತಾದವರು ಹಾಜರಿದ್ದರು.
ಹಿರಿಯ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಸಿದ್ಧಲಿಂಗ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಸಿದ್ಧರಾಮ, ಇಂದಿನ ನಮ್ಮ ಪೂಜ್ಯರ ಹೆಸರು ಸಿದ್ಧರಾಮ ಮಹಾಸ್ವಾಮಿಗಳು, ಹೀಗೆ ಲಿಂಗೈಕ್ಯ ಗುರುಗಳ ಪ್ರತಿರೂಪವೇ ಇಂದಿನ ಶ್ರೀಗಳಾಗಿದ್ದಾರೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಅನನ್ಯ ಪ್ರೀತಿ ಹಾಗೂ ಕೃಪಾಶೀರ್ವಾದಕ್ಕೆ ನಾನು ಪಾತ್ರನಾಗಿದ್ದೇನೆ. ಅವರ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದಲ್ಲಿ ನನ್ನಿಂದ ‘ಕಲ್ಯಾಣದ ಹಾದಿ’ ಗ್ರಂಥವನ್ನು ಬರೆಯಿಸಿದರು. ಇಂದಿನ ಅವರ ಜಯಂತಿಯಲ್ಲಿ ನನ್ನ ಕುರಿತು ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದರು.



