ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ರೈತರ ಹಿತ ಕಾಪಾಡುವುದು ಎಲ್ಲಾ ಪಕ್ಷಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರೈತರಿಗೆ ಬೆಂಬಲ ಬೆಲೆ ಒದಗಿಸುವಂತೆ ಒತ್ತಾಯಿಸಿ ಹೋರಾಟ ಮಾಡೋಣ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ತಿಳಿಸಿದರು.
ಹರಪನಹಳ್ಳಿ ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ಡಿಎಸ್‌ಎಸ್ (ಭೀಮವಾದ) ಸೇರಿ ವಿವಿಧ ಸಂಘಟನೆಗಳಿಂದ ಡಿ. 1ರಂದು ರಾಜ್ಯಾದ್ಯಂತ ನಡೆಯಲಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ನಿಗದಿ ಮಾಡುವ ಬದಲು ರಾಜ್ಯದಲ್ಲಿ ಆಡಳಿತ ಪಕ್ಷವು ಮುಖ್ಯಮಂತ್ರಿ ಗದ್ದುಗೆಯ ಗುದ್ದಾಟದಲ್ಲಿ ತಲ್ಲೀನವಾಗಿದೆ. ಅವರಿಗೆ ರೈತರ ಪರ ಯಾವುದೇ ಕಾಳಜಿಯಿಲ್ಲವೆಂದು ಟೀಕಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶೇಖರಪ್ಪ ಮಾತನಾಡಿ, ಅತಿವೃಷ್ಟಿಯಿಂದ ರಾಜ್ಯದಲ್ಲಿ ರೈತರ ಬದುಕು ಅಸಹನೀಯ ಸ್ಥಿತಿಯಲ್ಲಿದೆ. ಉಳಿದ ಬೆಳೆಯನ್ನು ಮಾರಾಟ ಮಾಡಲು ಹೋದರೆ ಮಧ್ಯವರ್ತಿಗಳ ಹಾವಳಿಗೆ ರೈತನು ನಲುಗಿ ಹೋಗಿದ್ದಾನೆ. ಮುಂಗಾರಿನ ಬೆಳೆಗೆ ಮಾತ್ರ ಸಮೀಕ್ಷೆ ಮಾಡಲಾಗುತ್ತಿದೆ. ಸರ್ಕಾರವು ಹಿಂಗಾರು ಬೆಳೆಗೂ ಸಮೀಕ್ಷೆ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಬೆಳೆ ಪರಿಹಾರ ಒದಗಿಸಬೇಕು ಎಂದರು.
ಬಿಜೆಪಿ ಮುಖಂಡ ಆರ್.ಲೋಕೇಶ್ ಮಾತನಾಡಿ, ಡಿ. 1ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಜಿ. ಸಿದ್ದೇಶ್, ಪುರಸಭೆ ಮಾಜಿ ಅಧ್ಯಕ್ಷ ಮೆಹಬೂಬ್ ಸಾಬ್, ಮಂಡಲ ಉಪಾಧ್ಯಕ್ಷ ಬಸವನಗೌಡ, ಗಂಗಾನಾಯ್ಕ, ಸಹ ಕಾರ್ಯದರ್ಶಿ ಮತ್ತಿಹಳ್ಳಿ ಕೆಂಚಪ್ಪ, ಪ್ರಸನ್ನ, ನಗರಸಭೆ ಸದಸ್ಯರಾದ ಕಿರಣ್ ಶಾನಭಾಗ, ತರಕಾರಿ ಹನುಮಂತಪ್ಪ, ಕೌಟಿ ವಾಗೀಶ್, ಜಾವೀದ್, ಮಲ್ಲೇಶ್, ಗೌರಿಹಳ್ಳಿ ಬಸವರಾಜ್, ಪೂಜಾರ್ ಮಹೇಶ್, ಹೊಸಹಳ್ಳಿ ಮಲ್ಲೇಶ್, ಹುಲಿಕಟ್ಟಿ ರಾಜಪ್ಪ, ಕೆ. ಸುಭಾಷ್ ಮುಂತಾದವರಿದ್ದರು.



