ಬೆಂಗಳೂರು: ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ 8 ಐಎಎಸ್ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಸದನದಲ್ಲಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.
ಈ ವಿಚಾರವಾಗಿ ಸ್ಪೀಕರ್ ಯು.ಟಿ. ಖಾದರ್ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿ ನಿನ್ನೆ ಸಭಾತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಮುಖ್ಯ ಕಾರ್ಯದರ್ಶಿ ಎಲ್ಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಒಂದು ವಾರದೊಳಗೆ ಉತ್ತರ ಸಲ್ಲಿಸಲು ಸೂಚಿಸಿದ್ದಾರೆ. ಉತ್ತರ ನೀಡಲು ವಿಫಲವಾದಲ್ಲಿ ಕಾರಣ ತಿಳಿಸಿ ಲಿಖಿತ ವಿವರಣೆ ನೀಡಬೇಕು ಎಂದು ತಿಳಿಸಲಾಗಿದೆ.
ನೋಟಿಸ್ ಪಡೆದ ಅಧಿಕಾರಿಗಳು
-
ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ – ಆರ್. ವಿನೋತ್ ಪ್ರಿಯಾ
-
ವಸತಿ ಇಲಾಖೆ ಕಾರ್ಯದರ್ಶಿ – ಮೋಹನ್ ರಾಜ್ ಕೆ.ಪಿ
-
ಸಾರಿಗೆ ಇಲಾಖೆ ಕಾರ್ಯದರ್ಶಿ – ಎನ್.ವಿ. ಪ್ರಸಾದ್
-
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ – ಆರ್. ಗೀರಿಶ್
-
ಲೋಕಪಯೋಗಿ ಇಲಾಖೆ ಕಾರ್ಯದರ್ಶಿ – ಅಮ್ಲಾನ್ ಆದಿತ್ಯ ಬಿಸ್ವಾಸ್
-
ಕಂದಾಯ ಇಲಾಖೆ ಕಾರ್ಯದರ್ಶಿ – ರಾಜೇಂದರ್ ಕುಮಾರ್ ಕಟಾರಿಯಾ
ಕೂಡಲೇ ಲಿಖಿತ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಜೆಟ್ ಅಧಿವೇಶನದ ವೇಳೆ ಒಟ್ಟು 230 ಪ್ರಶ್ನೆಗಳ ಪೈಕಿ ಕೇವಲ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರೆತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.
ಇದೇ ವಿಚಾರವಾಗಿ ನಿನ್ನೆ ಸ್ಪೀಕರ್ ಖಾದರ್ ಅವರು “ಸದನ ನಡೆಸುವುದು ಮಂತ್ರಿಗಳಿಗಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಮನವೊಲಿಸಿದ ಬಳಿಕ ಅವರು ಮರುಬಾರಿಗೆ ಅಧಿವೇಶನದಲ್ಲಿ ಭಾಗವಹಿಸಿದ್ದರು.



