ಬೆಂಗಳೂರು:- ಬೆಂಗಳೂರಿನ ತಮ್ಮ ಮನೆಗೆ ಜಾತಿ ಸಮೀಕ್ಷೆಗೆಂದು ಬಂದಿದ್ದ ಗಣತಿದಾರರಿಗೆ ಕೇಂದ್ರ ಸಚಿವ ಸೋಮಣ್ಣ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.
ಗುಂಪಾಗಿ ಬಂದವರನ್ನು ನೋಡಿ ಈ ವೇಳೆ ಇಷ್ಟು ಜನ ಯಾಕೆ ಬಂದಿದ್ದೀರಾ ಎಂದು ಸೋಮಣ್ಣ ಪ್ರಶ್ನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಿಸುತ್ತೆ. ಹೀಗಿರುವಾಗ ಇಷ್ಟು ಪ್ರಶ್ನೆಗಳು ಬೇಕಾ? ಇದೆಲ್ಲಾ ನೀವು ಸರ್ಕಾರಕ್ಕೆ ತಿಳಿಸಬೇಕಲ್ವಾ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಉಪಜಾತಿ ಯಾವುದು ಅಂತಾ ಗಣತಿದಾರರು ಕೇಳಿದಾಗ ಅದೆಲ್ಲಾ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಅಂತಾ ಬರೆದುಕೊಳ್ಳಿ ಎಂದು ಸೋಮಣ್ಣ ತಿಳಿಸಿದ್ದಾರೆ. ಮದುವೆ ಆದಾಗ ನಿಮಗೆ ಎಷ್ಟು ವರ್ಷ ಅಂತಾ ಸಿಬ್ಬಂದಿ ಕೇಳಿದ್ದು, ಇದನ್ನ ನಮ್ಮ ಅಪ್ಪ-ಅಮ್ಮನ ಕೇಳಬೇಕು. 26 ಅಂತಾ ಬರೆದುಕೊಳ್ಳಿ ಎಂದಿದ್ದಾರೆ. ಇದು ವೋಟ್ ಗಾಗಿ ಸಿದ್ದರಾಮಯ್ಯ ಮಾಡಿಸುತ್ತಿರುವ ಸಮೀಕ್ಷೆ ಎಂದಿರುವ ಕೇಂದ್ರ ಸಚಿವರು, ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಹೆಸರನ್ನೇ ಹಾಕೊಳ್ಳಿ ಎಂದಿದ್ದಾರೆ. ಉತ್ತರ ಕೊಡಲಾಗದ ಪ್ರಶ್ನೆಗಳನ್ನೆಲ್ಲಾ ನೀವು ಕೇಳುತ್ತಿದ್ದೀರಿ. ಸಿದ್ದರಾಮಯ್ಯ, ಡಿಕೆಶಿಯವರನ್ನ ಯಾವ ಗ್ರೂಪ್ ಹಾಕ್ತೀರಿ ಅಂತಾ ಗಣತಿದಾರ ಸಿಬ್ಬಂದಿಗೆ ಸೋಮಣ್ಣ ಮರು ಪ್ರಶ್ನಿಸಿದ ಪ್ರಸಂಗವೂ ನಡೆದಿದೆ.