ಬೆಂಗಳೂರು: ಅತಿಥಿ ಶಿಕ್ಷಕರಿಗೆ ಸರ್ಕಾರ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದಾದ್ಯಂತದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಪ್ರಕಟಿಸಿದೆ.
ಹೌದು 2025–26 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ನೀಡಿದೆ. ಮೇ 29, 2025 ರಂದು ಶಾಲೆಗಳು ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಎಂಬ ಉದ್ದೇಶ ಈ ತಾತ್ಕಾಲಿಕ ನೇಮಕಾತಿಗೆ ಆದೇಶ ಹೊರಡಿಸಿದೆ.
2025-26 ನೇ ಶೈಕ್ಷಣಿಕ ಸಾಲಿಗೆ ಖಾಲಿಯಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರುಗಳ ಹುದ್ದೆಗಳಿಗೆದುರಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರುಗಳನ್ನು ತಾತ್ಕಾಲಿಕವಾಗಿ ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಎಂಬ ಷರತ್ತಿಗೊಳಪಟ್ಟು ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಸರ್ಕಾರವು ಮಂಜೂರಾತಿ ನೀಡಿ ಆದೇಶಿಸಿದೆ.
ರಾಜ್ಯ ಸರ್ಕಾರದ ಈ ತ್ವರಿತ ಕ್ರಮವು ವಿದ್ಯಾರ್ಥಿಗಳ ಶಿಕ್ಷಣ ನಿರಂತರವಾಗಿರಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.51,000 ಅತಿಥಿ ಶಿಕ್ಷಕರ ಪೈಕಿ 40,000ರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಗೂ ಉಳಿದ 11,000ರನ್ನು ಸರ್ಕಾರಿ ಪ್ರೌಢ ಶಾಲೆಗಳಿಗೆ ನೇಮಿಸಿ ಆದೇಶಿಸಿದೆ.