ಗದಗ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದಿನೇದಿನೇ ಬೇರೂರುತ್ತಿದ್ದು, ಇಂದಿನ ಸರ್ಕಾರವೇ ಡ್ರಗ್ ಮಾಫಿಯಾ ಕಂಟ್ರೋಲ್ಡ್ ಸರ್ಕಾರದಂತೆ ವರ್ತಿಸುತ್ತಿದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಡ್ರಗ್ಸ್ ಬಳಕೆ ಅತಿ ಹೆಚ್ಚಾಗಿ ನಡೆಯುತ್ತಿದ್ದು, ಇದೇ ರೀತಿ ಮುಂದುವರೆದರೆ ರಾಜ್ಯ ಮತ್ತೊಂದು ‘ಉಡ್ತಾ ಪಂಜಾಬ್’ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಸಿದರು. ಈಗಾಗಲೇ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಎನ್ನಲಾಗುತ್ತಿದ್ದರೂ, ವಾಸ್ತವದಲ್ಲಿ ಡ್ರಗ್ಸ್ ದಂಧೆಗೆ ಯಾವುದೇ ಭಯ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ದಾಖಲಿಸಿದ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಸುಲಭವಾಗಿ ಬೇಲ್ ಸಿಗುತ್ತಿರುವುದು ಕಾನೂನು ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ ಎಂದರು.
ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಈಗಾಗಲೇ ಸ್ಪೆಷಲ್ ಕಾನೂನುಗಳು ಇದ್ದರೂ ಅವುಗಳನ್ನು ಸರಿಯಾಗಿ ಜಾರಿಗೆ ತರುತ್ತಿಲ್ಲ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು. 1988ರ ಕಾನೂನಿನ ಪ್ರಕಾರ ಕನಿಷ್ಠ ಒಂದು ವರ್ಷ ಬೇಲ್ ಸಿಗಬಾರದು ಎಂಬ ನಿಯಮ ಇದ್ದರೂ ಅದನ್ನೂ ಬಳಸುತ್ತಿಲ್ಲ. ಮಹಾರಾಷ್ಟ್ರದ ಪೊಲೀಸರು ಬಂದು ರಾಜ್ಯದಲ್ಲಿ ಡ್ರಗ್ಸ್ ರೇಡ್ ಮಾಡಬೇಕಾದ ಸ್ಥಿತಿ ಬಂದರೆ, ನಮ್ಮ ಪೊಲೀಸ್ ವ್ಯವಸ್ಥೆಯ ಸ್ಥಿತಿ ಏನು ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು. ರಾಜ್ಯದ ಕೆಲ ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಶಾಮೀಲಾಗಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ ಎಂದು ಹೇಳಿದರು.
ಡ್ರಗ್ಸ್ ಮಾಫಿಯಾ ಎಲ್ಲ ಕಾಲೇಜುಗಳಲ್ಲೂ ವ್ಯಾಪಕವಾಗಿ ಹರಡಿದ್ದು, ಹಾವೇರಿ ಜಿಲ್ಲೆವರೆಗೂ ಜಾಲ ವಿಸ್ತರಿಸಿದೆ. ಜಿಲ್ಲಾ ಕೇಂದ್ರಗಳಲ್ಲಿಯೂ ಡ್ರಗ್ಸ್ ಸುಲಭವಾಗಿ ಲಭ್ಯವಾಗುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು, ಡ್ರಗ್ಸ್ ದಂಧೆ ನಡೆಯುವ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಹೊಸ ಅಧಿಕಾರಿಗಳನ್ನು ನೇಮಕ ಮಾಡಬೇಕು. ಸ್ಕ್ವಾಡ್ ರಚಿಸಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ದ್ವೇಷ ಭಾಷಣದಂತಹ ಕಾನೂನುಗಳಿಗಿಂತ ಮೊದಲು ಡ್ರಗ್ಸ್ ಮಾಫಿಯಾ ವಿರುದ್ಧ ಉಗ್ರ ಮತ್ತು ಕಠಿಣ ಕಾನೂನು ತರಬೇಕೆಂದು ಆಗ್ರಹಿಸಿದರು.
ರೈತರ ಗೊಬ್ಬರ, ಬೀಜ ಕಳ್ಳತನಕ್ಕೂ, ಡ್ರಗ್ಸ್ ದಂಧೆಗೂ, ಕಳ್ಳಭಟ್ಟಿಗೂ ಬಿಗಿ ಕಾನೂನು ಇಲ್ಲದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಸಾಕ್ಷಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಸರ್ಕಾರ ತನ್ನ ಒಳಜಗಳ ಮತ್ತು ಕಚ್ಚಾಟದಲ್ಲಿ ತೊಡಗಿರುವುದರಿಂದ ಡ್ರಗ್ಸ್ ಮಾಫಿಯಾಗಳು ನಿರ್ಬಂಧವಿಲ್ಲದೆ ತಮ್ಮ ಅಕ್ರಮ ಚಟುವಟಿಕೆ ನಡೆಸುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಕರ್ನಾಟಕವೇ ‘ಉಡ್ತಾ ಕರ್ನಾಟಕ’ ಆಗುತ್ತದೆ ಎಂದು ಅವರು ಗಂಭೀರ ಎಚ್ಚರಿಕೆ ನೀಡಿದರು.



