ವಿಜಯಸಾಕ್ಷಿ ಸುದ್ದಿ, ಗದಗ: ಗೋಹತ್ಯೆ ನಿಷೇಧ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಗೋವು ಕಳ್ಳರಿಗೆ ಸಹಕರಿಸುವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಎಚ್ಪಿ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಸಮಾಜಕ್ಕೆ ಕಿರುಕುಳ ನೀಡುತ್ತಲೇ ಬಂದಿದೆ. ಅದರ ಮುಂದುವರಿದ ಭಾಗವಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-2020’ನ್ನು ಸಡಿಲಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬ ವರದಿಗಳು ಆತಂಕ ಮೂಡಿಸುತ್ತಿದೆ ಎಂದರು.
ಪ್ರಸ್ತುತ ಜಾರಿಯಲ್ಲಿರುವ ಕಾಯಿದೆಯ ಸೆಕ್ಷನ್ 8ರ ಪ್ರಕಾರ, ಅಕ್ರಮ ಗೋಸಾಗಾಟದ ವೇಳೆ ಪೊಲೀಸರು ವಾಹನವನ್ನು ಜಪ್ತಿ ಮಾಡಿದರೆ, ಆ ವಾಹನವನ್ನು ತಾತ್ಕಾಲಿಕವಾಗಿ ಬಿಡಿಸಿಕೊಳ್ಳಲು ವಾಹನದ ಮೌಲ್ಯದಷ್ಟೇ ಮೊತ್ತದ ಬ್ಯಾಂಕ್ ಗ್ಯಾರಂಟಿ ನೀಡುವುದು ಕಡ್ಡಾಯವಾಗಿದೆ. ಉದಾಹರಣೆಗೆ, 5 ಲಕ್ಷ ರೂ. ಮೌಲ್ಯದ ವಾಹನವಿದ್ದರೆ, 5 ಲಕ್ಷ ರೂ.ಗಳ ಬ್ಯಾಂಕ್ ಗ್ಯಾರಂಟಿ ನೀಡಿದರಷ್ಟೇ ವಾಹನ ಬಿಡುಗಡೆಯಾಗುತ್ತದೆ. ಅಪರಾಧ ಸಾಬೀತಾದರೆ ಈ ಹಣ ಸರಕಾರಕ್ಕೆ ಮುಟ್ಟುಗೋಲಾಗುವ ಭಯವಿತ್ತು. ಇದರಿಂದಾಗಿ ಅಕ್ರಮ ಸಾಗಾಟಕ್ಕೆ ಸಾಕಷ್ಟು ಕಡಿವಾಣ ಬಿದ್ದಿತ್ತು.
ಆದರೆ ಈಗ ರಾಜ್ಯ ಸರಕಾರವು ಗೋಕಳ್ಳರ ಮೇಲಿನ ಅತಿಯಾದ ಪ್ರೀತಿಯಿಂದ, ಅವರಿಗೆ ಬ್ಯಾಂಕ್ ಗ್ಯಾರಂಟಿ ಒದಗಿಸಲು ಕಷ್ಟವಾಗುತ್ತದೆ ಎಂಬ ಅಸಂಬದ್ಧ ನೆಪವೊಡ್ಡಿ, ಕೇವಲ ಸಾಲದ ಬಾಂಡ್ ಬರೆದುಕೊಟ್ಟರೆ ಸಾಕು ಎಂಬ ತಿದ್ದುಪಡಿ ತರಲು ಹೊರಟಿದೆ. ಇದು ಪರೋಕ್ಷವಾಗಿ ಸರಕಾರವು ಗೋಕಳ್ಳರ ಬೆಂಬಲಕ್ಕೆ ನಾವಿದ್ದೇವೆ ಎನ್ನುವ ಸಂದೇಶ ನೀಡಿದಂತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಎಚ್ಪಿ ಪ್ರಮುಖರಾದ ಸಂಜೀವ ಜೋಶಿ, ಲುಕ್ಕಣಸಾ ರಾಜೋಳಿ, ಎಂ.ಎನ್. ಪವಾರ, ರಾಘವೇಂದ್ರ ವರ್ಣೇಕರ್, ಸುರೇಶ ಹಾದಿಮನಿ, ಕೆ.ಎಸ್. ಹಿರೇಮಠ, ಕೆ.ಕೆ. ಪರ್ವತಗೌಡ್ರ, ರೇವಣಸಿದ್ದಪ್ಪ ಗೊಡಚಪ್ಪನವರ, ಸುರೇಶ ಮರಳಪ್ಪನವರ ಇತರರು ಉಪಸ್ಥಿತರಿದ್ದರು.
ಬಾಕ್ಸ್
ಈ ತಿದ್ದುಪಡಿಯಿಂದಾಗಿ ಗೋವುಗಳ ಮೇಲಿನ ಹಿಂಸೆ ಹೆಚ್ಚಾಗಲಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆ ತರಲಿದೆ. ಸರಕಾರವೇ ಜನರನ್ನು ಉದ್ವಿಗ್ನಗೊಳಿಸಲು ಪ್ರಚೋದನೆ ನೀಡುತ್ತಿದೆ. ಅಕ್ರಮ ಗೋಸಾಗಾಟಗಾರರಿಗೆ ಅನುಕೂಲ ಮಾಡಿಕೊಡುವ ಈ ತಿದ್ದುಪಡಿಯನ್ನು ತಕ್ಷಣವೇ ಕೈಬಿಡಬೇಕು. ಒಂದು ವೇಳೆ ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದರೆ, ಹಿಂದೂ ಸಮಾಜದ ನೇತೃತ್ವದಲ್ಲಿ ರಾಜ್ಯದಾದ್ಯಂತ ತಳಮಟ್ಟದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀಧರ ಕುಲಕರ್ಣಿ ಎಚ್ಚರಿಕೆ ನೀಡಿದರು.



