ನವದೆಹಲಿ: ಬೀದಿನಾಯಿಗಳ ಕಡಿತದಿಂದ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಮಕ್ಕಳು ಮತ್ತು ವೃದ್ಧರು ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಯಾರು ಹೊಣೆಗಾರರು ಎಂಬ ಗಂಭೀರ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ, 9 ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿ, “ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿನಾಯಿಗಳಿಂದ ಮಗು ಸಾವನ್ನಪ್ಪಿದರೆ ಹೊಣೆ ಯಾರದ್ದು?” ಎಂದು ಪ್ರಶ್ನಿಸಿತು. “ನ್ಯಾಯಾಲಯ ಕಣ್ಣು ಮುಚ್ಚಿ ಎಲ್ಲವೂ ನಡೆಯಲು ಬಿಡಬೇಕೇ?” ಎಂದು ಪೀಠ ಕಠಿಣವಾಗಿ ಕೇಳಿತು.
“ಕೇವಲ ನಾಯಿಗಳ ಮೇಲಷ್ಟೇ ಕನಿಕರವೇಕೆ? ಮಾನವರ ಮೇಲೆ ನಡೆಯುವ ದಾಳಿಗಳ ಬಗ್ಗೆ ಏಕೆ ಮೌನ?” ಎಂದು ಪ್ರಶ್ನಿಸಿದ ನ್ಯಾಯಾಲಯ, ನಾಯಿ ಕಡಿತದಿಂದ ಉಂಟಾಗುವ ಸಾವು–ಗಾಯಗಳಿಗೆ ರಾಜ್ಯ ಸರ್ಕಾರ ಪರಿಹಾರ ಪಾವತಿಸಬೇಕು ಎಂದು ತಿಳಿಸಿದೆ. ಜೊತೆಗೆ, ನಾಯಿ ಮಾಲೀಕರು ಮತ್ತು ಅವುಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಮೇಲೂ ಜವಾಬ್ದಾರಿ ನಿಗದಿಪಡಿಸಿ ಪರಿಹಾರ ವಿಧಿಸಲಾಗುತ್ತದೆ ಎಂದು ಹೇಳಿದೆ.
ನಾಯಿಗಳಿಗೆ ಆಹಾರ ನೀಡಲು ಅಥವಾ ಆರೈಕೆ ಮಾಡಲು ಬಯಸುವವರು ತಮ್ಮ ಸ್ವಂತ ಆವರಣದಲ್ಲೇ ಅಥವಾ ಮನೆಯಲ್ಲೇ ಮಾಡಬೇಕು. ಅವುಗಳನ್ನು ಬೀದಿಗಳಲ್ಲಿ ಸುತ್ತಾಡಲು ಬಿಡುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಯಾಕೆ ಎಂಬ ಪ್ರಶ್ನೆಯನ್ನು ಪೀಠ ಮುಂದಿಟ್ಟಿತು.
ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಚಾರಣೆ ವೇಳೆ ಇನ್ನಷ್ಟು ಗಂಭೀರ ಪ್ರಶ್ನೆಗಳನ್ನು ಎತ್ತಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹಿಂದಿನ ವಿಚಾರಣೆಯಲ್ಲಿ ನಾಯಿಗಳ ಮೇಲಿನ ಕ್ರೌರ್ಯ ವೀಡಿಯೊಗಳನ್ನು ವೀಕ್ಷಿಸಲು ನಿರಾಕರಿಸಿದ್ದನ್ನು ನೆನಪಿಸಿಕೊಂಡ ನ್ಯಾಯಾಲಯ, ಮಕ್ಕಳು ಮತ್ತು ವೃದ್ಧರ ಮೇಲೆ ನಾಯಿಗಳ ದಾಳಿಯನ್ನು ತೋರಿಸುವ ವೀಡಿಯೊಗಳೂ ಇದ್ದವೆ ಎಂಬುದನ್ನು ಗಮನಿಸಿತು.



