ಮಂಗಳೂರು: ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕ ಸರ್ಕಾರಕ್ಕೆ ಸಂದಾಯವಾಗುವುದಿಲ್ಲ.
ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಅಷ್ಟಕ್ಕೂ ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.ಇನ್ನೂ ಮೂರು, ನಾಲ್ಕು ವರ್ಷಗಳಿಗೊಮ್ಮೆ ಶುಲ್ಕ ಪರಿಷ್ಕರಣೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಗ್ಯಾರಂಟಿಗಳಿಗೆ ತಳುಕು ಹಾಕಿ ನೋಡುವುದು ಸರಿಯಲ್ಲ.
ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದ ಹಣವನ್ನು ಆಯಾ ಆಸ್ಪತ್ರೆಗಳ ಎಆರ್‌ಎಸ್ ಸಮಿತಿಗಳು ಚರ್ಚೆ ನಡೆಸಿ ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡುತ್ತವೆ. ಆಸ್ಪತ್ರೆಯ ಎಆರ್‌ಎಸ್ ಫಂಡ್ ಹೆಸರಲ್ಲಿ ಅನುದಾನ ಲಭ್ಯವಿರುತ್ತದೆ. ಆಸ್ಪತ್ರೆಯ ಸ್ವಚ್ಛತೆ, ದುರಸ್ಥಿ ಕಾರ್ಯಗಳು ಸೇರಿದಂತೆ ಆಸ್ಪತ್ರೆಗಳ ಅಭಿವೃದ್ಧಿಗಳಿಗೆ ಬಳಕೆ ಮಾಡಲಾಗುತ್ತದೆ. ಸರ್ಕಾರ ಕೇವಲ ಅನುಮತಿ ನೀಡುತ್ತದೆ ಅಷ್ಟೇ ಎಂದು ಹೇಳಿದರು.