ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ 3 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯಾ ಬಲವುಳ್ಳ ವೀರಶೈವ-ಲಿಂಗಾಯತರು ಒಗ್ಗಟ್ಟಾದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನೇ ಅಲುಗಾಡಿಸಿ ನಾವಿದ್ದಲ್ಲಿಗೆ ಹಕ್ಕು-ಸೌಲಭ್ಯಗಳನ್ನು ಪಡೆಯಬಹುದು. ಕಾರಣ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಜ್ಯ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ಅವರು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಹಾಸಭಾದ ಗದಗ ಜಿಲ್ಲಾ ಘಟಕ ರವಿವಾರ ಏರ್ಪಡಿಸಿದ್ದ ಮಹಾಸಭಾದ ಆಜೀವ ಸದಸ್ಯತ್ವ ಅಭಿಯಾನ ಹಾಗೂ ಸಂಘಟನೆಯ ಬಲವರ್ಧನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾಸಭಾ ರಾಜ್ಯ ಸಂಘಟನೆಯು ರಾಜ್ಯದ ವೀರಶೈವ-ಲಿಂಗಾಯತರನ್ನು ಪ್ರಬಲ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು, 2027ರೊಳಗೆ ರಾಜ್ಯದ ಕನಿಷ್ಠ 200 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ 10 ಸಾವಿರ ಆಜೀವ ಸದಸ್ಯರನ್ನು ಮಾಡುವ ಗುರಿ ಹೊಂದಿದೆ. ಹಾಗೆಯೇ ಗದಗ ಜಿಲ್ಲೆಯಲ್ಲೂ 50 ಸಾವಿರ ಸದಸ್ಯರನ್ನು ಮಾಡಲು ಜಿಲ್ಲಾ ತಾಲೂಕು ಸಂಘಟನೆಗಳು ಹೆಚ್ಚು ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು. ಸಮಾಜ ಬಾಂಧವರು ಈ ವಿಷಯಕ್ಕೆ ಕೈಜೋಡಿಸಬೇಕು ಎಂದರು.
ಮಹಾಸಭಾದ ತಾಲೂಕಾ ಸಂಘಟನೆಯ ಮೂಲಕ ಸಮಾಜದ ಪ್ರತಿ ಕುಟುಂಬದ ಜನಗಣತಿ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ವಾಸ್ತವಿಕ ಚಿತ್ರಣದ ಮಾಹಿತಿಯನ್ನು ಗಣಕೀಕೃತ ಮಾಡಲು ಉದ್ದೇಶಿದೆ. ಶೀಘ್ರದಲ್ಲೇ ರಾಜ್ಯದ ಎಲ್ಲ ತಾಲೂಕ ಘಟಕಗಳಿಗೆ ಕಂಪ್ಯೂಟರ್‌ಗಳನ್ನು ನೀಡಿ ಈರ್ವರು ಸಿಬ್ಬಂದಿಗಳನ್ನು ನೇಮಿಸಿ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಕಾರಣ ವೀರಶೈವ-ಲಿಂಗಾಯತ ಕುಟುಂಬದ ಮುಖ್ಯಸ್ಥರು ಮಕ್ಕಳ ಹಾಗೂ ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಮಾಹಿತಿ ಒದಗಿಸಬೇಕೆಂದರು.
ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ತಾಲೂಕ, ಜಿಲ್ಲಾ ಕೇಂದ್ರಗಳಿಂದ ಲಭ್ಯವಾಗುವ ಈ ಎಲ್ಲ ಸಮಗ್ರ ಮಾಹಿತಿಯನ್ನು ರಾಜ್ಯ ಮಹಾಸಭಾ ಕ್ರೋಢೀಕರಣ ಮಾಡಿಕೊಂಡು ಸಮಾಜದ ಒಗ್ಗಟ್ಟಿನ ಅಸ್ತ್ರವನ್ನು ಪ್ರಯೋಗಿಸಿ ನಮ್ಮ ಹಕ್ಕು ಬೇಡಿಕೆ ಮಂಡಿಸಿ ಮೀಸಲಾತಿ, ಹಕ್ಕು, ಸೌಲಭ್ಯಗಳನ್ನು ನೀಡಲು ಸರಕಾರ ಮನೆ ಬಾಗಿಲಿಗೆ ಬರುವಂತೆ ಮಾಡಲು ಸಾಧ್ಯವಿದೆ. ಅದು ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಒಗ್ಗಟ್ಟಿನಲ್ಲಿ ಬಲವಿದೆ, ಅಭಿವೃದ್ಧಿ ಇದೆ ಎಂದರು.
ಮಹಾಮಾನವತಾವಾದಿ ಬಸವಣ್ಣನವರು ಕಟ್ಟಿದ ಸಾಮಾಜಿಕ ವೈಚಾರಿಕತೆಯ ಬಹುವಿಶಾಲವಾದ ಅರ್ಥದ ಮಹಾಮನೆ ಇಂದು ವಿಭಜನೆಯೊಂದು ಜಾತಿ ಉಪಜಾತಿ, ಉಪಪಂಗಡಳಿಂದ ಕಂಪಾರ್ಟ್ ಮೆಂಟ್ ಗಳಾಗಿವೆ. ಈ ಅಡ್ಡಗೋಡೆಯನ್ನು ತೆರೆದು ವಿಶಾಲವಾದ ಮನೆ ನಿರ್ಮಾಣಗೊಳ್ಳಬೇಕಿದೆ ಎಂದರು.
ಅನುಭವ ಮಂಟಪದ ಮೂಲಕ ಬಸವಣ್ಣ ಸಾಮಾಜಿಕ ವೈಚಾರಿಕ ಕ್ರಾಂತಿ ಮಾಡಿರುವ ಈ ಪುಣ್ಯ ನೆಲದಲ್ಲಿ ಬಸವಣ್ಣನ ವಾರಸುದಾರರಾದ ನಾವು ಪರಸ್ಪರ ತಿಳುವಳಿಕೆ, ಪ್ರಜ್ಞಾವಂತಿಕೆಯಿಂದ ಜೀವನ ಮಾಡಬೇಕಿದೆ. ವೀರಶೈವ-ಲಿಂಗಾಯತರು ದುಡಿದ ಹಣವನ್ನು ಜಗಳ, ತಂಟೆ ತಕರಾರು ಮಾಡಿಕೊಂಡು ಪೋಲೀಸ್, ಕೋರ್ಟ್ ಎಂದೆಲ್ಲಾ ಅಲೆದಾಡಿ, ಸಂಬAಧಗಳನ್ನು ಹಾಳು ಮಾಡಿಕೊಳ್ಳುವರು ಎಂಬ ಮಾತಿದೆ ಇದನ್ನು ಅಳಿಸಿ ಹಾಕಬೇಕು ಎಂದು ತಿಳಿಸಿದರು.
ಹಿರಿಯರು ನಡೆಸಿದ, ಪಂಚಾಯಿತಿ ನೀಡಿದ ತೀರ್ಪುಗಳ ಮುಂದೆ ಯಾವ ಹೈಕೋರ್ಟ್, ಸುಪ್ರೀಂ ಕೋರ್ಟ್ ನೀಡಿಲ್ಲ. ಒಂದು ವೇಳೆ ನೀಡಿದ್ದರೆ ನ್ಯಾಯ ಕೇಳಿದವರು ಮಣ್ಣಾಗಿರುತ್ತಾರೆ ಇಲ್ಲವೇ ಆರ್ಥಿಕವಾಗಿ ದಿವಾಳಿ ಆಗಿರುತ್ತಾರೆ. ಕಾರಣ ಸಮಾಜದ ಹಿರಿಯರು ಈ ಬಗ್ಗೆ ಗಂಭೀರ ಚಿಂತನೆ, ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಸಮಸ್ತ ವೀರಶೈವ-ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಸಮಾಜ ಸಂಘಟನೆಗೆ ಹಲವಾರು ರೂಪುರೇಷೆಗಳನ್ನು ಕೈಗೆತ್ತಿಕೊಂಡಿದ್ದು, ತಾಲೂಕ, ಜಿಲ್ಲಾ ಘಟಕಗಳ ಮೂಲಕ ಅದನ್ನು ಸಾಕಾರಗೊಳಿಸಲು ಬದ್ಧತೆಯಿಂದ ಕಾರ್ಯ ಮಾಡುತ್ತಿದೆ. ವೀರಶೈವ-ಲಿಂಗಾಯತ ಎರಡೂ ಒಂದೇ ಎಂದು ಸ್ಪಷ್ಟಪಡಿಸಿ ಗುರು-ವಿರಕ್ತರು ಒಂದೇ ಆಗಿದ್ದು ಜನಕಲ್ಯಾಣ, ಸಮಾಜ ಉದ್ಧಾರ ಅವರ ಉದ್ದೇಶ ಎಂಬುದನ್ನು ನಾವು ತಿಳಿಯಬೇಕು ಎಂದು ಶಂಕರ ಬಿದರಿ ತಿಳಿಸಿದರು.