ಬೆಂಗಳೂರು: ಸರ್ಕಾರಿ ಕೆಲಸ ದೇವರ ಕೆಲಸ ಅಲ್ಲ, ದೆವ್ವಗಳ ಕೆಲಸ ಎನ್ನುವಂತಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮಹಿಳಾ ಅಧಿಕಾರಿ ವಿರುದ್ಧ ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ನಿಂದನೆ, ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರಿ ಕೆಲಸ ದೇವರ ಕೆಲಸ ಅಲ್ಲ,ದೆವ್ವಗಳ ಕೆಲಸ ಎನ್ನುವಂತಾಗಿದೆ. ಕಾಂಗ್ರೆಸ್ ,ಹಾಗೂ ಅದರ ಅಧಿಕಾರಿಗಳು ಬಂದ ಮೇಲೆ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದ್ದಾರೆ.
ಈ ಸರ್ಕಾರದಲ್ಲಿ ಮಹಿಳಾ ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು? ಮಹಿಳಾ ಅಧಿಕಾರಿಗಳಿಗೆ ಇಲ್ಲಿ ರಕ್ಷಣೆಯೇ ಇಲ್ಲ. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಮಾಡಲಾಗಿದೆ. ಒಬ್ಬ ಸಚಿವ ಕೃತ್ಯ ಎಸಗಿದವರನ್ನು ಸಣ್ಣಹುಡುಗರು ಅಂತಾರೆ , ಬಾಂಬ್ ಸ್ಫೋಟ ಆಗಿದ್ದಾಗ ಅವರು ಬ್ರದರ್ಸ್ ಆದರು ಎಂದು ಕಿಡಿಕಾರಿದ್ದಾರೆ.