ಸರ್ಕಾರಗಳು ರೈತರ ಬದುಕಿನೊಂದಿಗೆ ಆಟವಾಡುತ್ತಿವೆ: ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರ ಮೆಕ್ಕೆಜೋಳ ಬೆಳೆದ ರೈತರ ಬೆಂಬಲಕ್ಕೆ ನಿಲ್ಲದ್ದಿದ್ದರೆ ಎಲ್ಲಾ ರೈತರು ಗವಿನಜೋಳವನ್ನು ಆಯಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ಹಾಗೂ ರಾಜ್ಯಾದ್ಯಂತ ಎಲ್ಲ ರಸ್ತೆಗಳಲ್ಲಿ ಹಾಕಿ ರಸ್ತೆ ಬಂದ್ ಮಾಡಿದಾಗ ಮಾತ್ರ ಎಸಿ ಕಾರಿನಲ್ಲಿ ತಿರುಗಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಬಿಸಿ ತಟ್ಟುತ್ತದೆ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಬುಧವಾರ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಲಕ್ಷ್ಮೇಶ್ವರದಲ್ಲಿ 5 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು.

ರೈತರು ಶಾಂತಿಯುತವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆಗೆ ಕೇಳುತ್ತಿದ್ದರೂ ಸರಕಾರ ಕಣ್ತೆರೆಯುತ್ತಿಲ್ಲ. ರೈತರ ಹೆಸರು ಹೇಳಿಕೊಂಡೇ ಚುನಾವಣೆ ಗೆಲ್ಲುವ ಎಲ್ಲ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಿದ ನಂತರ ರೈತರ ಬಗ್ಗೆ ಕಿಂಚಿತ್ತೂ ಗಮನ ಹರಿಸದೇ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತವೆ ಎಂದರು.

ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು ಮಾತನಾಡಿ, ಪ್ರತಿವರ್ಷವೂ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕಾಗಿ ಹೋರಾಟ ಮಾಡುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ತಪ್ಪಬೇಕು ಮತ್ತು ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ರೈತರು ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಈಡೇರಿಸಿಕೊಳ್ಳುವ ಪರಿಸ್ಥಿತಿ ಸರಿಯಲ್ಲ ಎಂದರು.

ಕುಂದಗೋಳ ಕಲ್ಯಾಣಪುರಮಠ ಬಸವಣ್ಣ ಅಜ್ಜನವರು ಮಾತನಾಡಿ, ಸರ್ಕಾರಗಳು ರೈತರ ಧ್ವನಿಯಾಗಿರಬೇಕು. ರೈತರ ಬದುಕು ಈ ವರ್ಷದ ಕಾರ್ತಿಕ ಮಾಸದ ದೀಪದೊಂದಿಗೆ ಪ್ರಜ್ವಲಿಸಬೇಕೆಂದರೆ ನ. 20ರಂದು ಕರೆ ನೀಡಿರುವ ಲಕ್ಷ್ಮೇಶ್ವರ ಬಂದ್‌ಗೆ ಮತ್ತು ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಜಮಖಂಡಿ ಮತ್ತು ಕುಕನೂರ ಶ್ರೀಗಳು, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವರು ಬೆಂಬಲ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಮೈಸೂರಿನ ಫಯಾಜ್ ಮಾತನಾಡಿ, ರೈತರು, ಮಠಾಧೀಶರು 5 ದಿನಗಳಿಂದ ಅನ್ನ- ನೀರು ಬಿಟ್ಟು ನ್ಯಾಯವಾದ ಬೇಡಿಕೆಗೆ ಹೋರಾಟ ಮಾಡುತ್ತಿದ್ದರೂ ಶಾಸಕರು, ಉಸ್ತುವಾರಿ ಸಚಿವರು ಇಲ್ಲಿಯವರೆಗೂ ಬಂದು ರೈತರಿಗೆ ಸಾಂತ್ವನ ಹೇಳದಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜವಾಬ್ದಾರಿಯಿಂದ ಬೇಡಿಕೆ ಈಡೇರಿಸಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಫಯಾಜ್ ಮೈಸೂರು, ರಾಮಣ್ಣ ಲಮಾಣಿ (ಶಿಗ್ಲಿ), ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಚನ್ನಪ್ಪ ಜಗಲಿ, ಡಿ.ವೈ ಹುನಗುಂದ, ಶರಣು ಗೋಡಿ ಮುಂತಾದವರು ಮಾತನಾಡಿದರು.

ರೈತರಾದ ಬಸವರಾಜ ಬೆಂಡಿಗೇರಿ, ಪೂರ್ಣಜಿ ಖರಾಟೆ, ನಾಗಪ್ಪ ಗೌರಿ, ಮಹಾಂತೇಶ ಉಮಚಗಿ, ಉಪವಾಸ ಕೈಗೊಂಡಿದ್ದಾರೆ. ತಹಸೀಲ್ದಾರ ರಾಘವೇಂದ್ರ ರಾವ್, ಸಿಪಿಐ ಬಿ.ವಿ ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ. ರಾಠೋಡ ಇವರನ್ನೊಳಗೊಂಡ ಪೊಲೀಸ್ ಪಡೆ ಯಾವುದೇ ಅಹಿತಕರ ಘಟನೆಯಾಗದಂತೆ ನಿಗಾ ವಹಿಸಿದ್ದಾರೆ.

ಹೋರಾಟದ ನೇತೃತ್ವ ವಹಿಸಿರುವ ಸಮಗ್ರ ರೈತ ಹೋರಾಟ ಸಂಘಟನೆಗಳ ಮುಖಂಡ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಪರಮೇಶ ಲಮಾಣಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ಚನ್ನಪ್ಪ ಷಣ್ಮುಖಿ, ಹೊನ್ನಪ್ಪ ವಡ್ಡರ, ನೀಲಪ್ಪ ಶೆರಸೂರಿ, ಮಂಜುನಾಥ ಕೊಡಳ್ಳಿ, ಮಲ್ಲಿಕಾರ್ಜುನ ನಿರಾಲೋಟ, ಟಾಕಪ್ಪ ಸಾತಪುತೆ, ಗುರಪ್ಪ ಮುಳುಗುಂದ, ಸೋಮಣ್ಣ ಡಾಣಗಲ್, ಪ್ರಕಾಶ ಕೊಂಚಿಗೇರಿಮಠ, ಪವನ ಬಂಕಾಪುರ, ಭರತ ಬಳಿಗಾರ ನೂರಾರು ರೈತರು ಇದ್ದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಸಮಗ್ರ ರೈತ ಹೋರಾಟ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶ್ರೀ ರಾಮಸೇನೆ, ಬಜಾರ ವ್ಯಾಪಾರಸ್ಥರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘ, ವಿದ್ಯಾರ್ಥಿ ಸಂಘಟನೆಗಳು, ರೈತರು, ಗೋಸಾವಿ ಸಮಾಜ, ವಕೀಲರ ಸಂಘ, ಮೆಕಾನಿಕ್ ಸಂಘ, ಮಾಜಿ ಸೈನಿಕರ ಸಂಘ, ಔಷಧ ವ್ಯಾಪಾರಸ್ಥರ ಸಂಘ ಸೇರಿ ಅನೇಕರು ಧರಣಿ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರಲ್ಲದೆ, ಗುರುವಾರದ ಲಕ್ಷ್ಮೇಶ್ವರ ಬಂದ್‌ಗೆ ವ್ಯಾಪಾರ-ವಹಿವಾಟು ಬಂದ್ ಮಾಡಿ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

 


Spread the love

LEAVE A REPLY

Please enter your comment!
Please enter your name here