ಬಳ್ಳಾರಿ: ಬಳ್ಳಾರಿ ಬ್ಯಾನರ್ ಗಲಭೆ (Ballari Clash) ಪ್ರಕರಣದ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೈಗೊಂಡಿದ್ದ ಕ್ರಮಗಳಲ್ಲಿ ರಾಜ್ಯ ಸರ್ಕಾರ ಇದೀಗ ದಿಢೀರನೇ ಯು-ಟರ್ನ್ ತೆಗೆದುಕೊಂಡಿದೆ. ವರ್ಗಾವಣೆ ಮಾಡಲಾಗಿದ್ದ ಡಿವೈಎಸ್‌ಪಿ ಚಂದ್ರಕಾಂತ ನಂದಾರೆಡ್ಡಿ ಅವರನ್ನು ಮತ್ತೆ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಘಟನೆ ನಡೆದ ಮರುದಿನವೇ ಎಸ್ಪಿ ಪವನ್ ನೆಜ್ಜೂರ್ ಸಸ್ಪೆಂಡ್ ಆಗಿದ್ದರು. ಡಿಐಜಿ ವರ್ತಿಕಾ ಕಟಿಯಾರ್ ವರ್ಗಾವಣೆಯೂ ಆಗಿತ್ತು. ಇದಾದ ಬಳಿಕ ಡಿವೈಎಸ್‌ಪಿ ನಂದಾರೆಡ್ಡಿ ಅವರನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ 2023 ಬ್ಯಾಚ್ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರನ್ನು ನೇಮಕ ಮಾಡಲಾಗಿತ್ತು.
ಆದರೆ ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಸರ್ಕಾರ ನಂದಾರೆಡ್ಡಿ ಅವರನ್ನು ವಾಪಸ್ ಕರೆಸಿಕೊಂಡಿದೆ. ಇದರಿಂದ ಚಾರ್ಜ್ ತೆಗೆದುಕೊಳ್ಳಲು ಬಂದ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾಗೆ ಭಾರೀ ಮುಜುಗರ ಉಂಟಾಗಿದ್ದು, ಅವರನ್ನು ಕೇಂದ್ರ ಸ್ಥಾನಕ್ಕೆ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಬ್ಯಾನರ್ ಗಲಭೆ ಪ್ರಕರಣದಲ್ಲಿ ಪೊಲೀಸ್ ವೈಫಲ್ಯವಾಗಿದೆ ಎಂದು ಎಡಿಜಿಪಿ ಆರ್. ಹಿತೇಂದ್ರ ಸರ್ಕಾರಕ್ಕೆ ಸ್ಪಷ್ಟ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಂದಾರೆಡ್ಡಿ ಅವರ ವರ್ಗಾವಣೆ ನಡೆದಿತ್ತು. ಈಗ ಅವರನ್ನು ಮತ್ತೆ ಮುಂದುವರಿಸಿರುವುದು ಸರ್ಕಾರದ ನಿರ್ಧಾರಗಳ ಮೇಲೆಯೇ ಹಲವು ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಕಾರಣವಾಗುತ್ತಿದೆ.



