ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ, ಹುಬ್ಬಳ್ಳಿಯ ವಿಮಾನ ನಿಲ್ದಾಣಗಳಿಗೆ ಜಗಜ್ಯೋತಿ ಶ್ರೀ ಬಸವಣ್ಣನವರು, ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೆಸರಿಡಬೇಕೆಂಬ ಜನಾಭಿಪ್ರಾಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು ಎಂದು ಶಿರಹಟ್ಟಿ/ಬಾಲೆಹೊಸೂರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದ್ದಾರೆ.
ಈ ಕುರಿತು ಶ್ರೀಗಳು ಪತ್ರಿಕಾ ಹೇಳಿಕೆ ನೀಡಿ, ಈಗಾಗಲೇ ಈ ವಿಷಯದ ಬಗ್ಗೆ ವಿಧಾನಮಂಡಲದಲ್ಲಿ ಪ್ರಸ್ತಾಪಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ನಾಡಿನ ಕಲ್ಯಾಣ, ಶ್ರೇಯೋಭಿವೃದ್ಧಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಇಂತಹ ಮಹನೀಯರ ಹೆಸರಿಡುವ ಮೂಲಕ ಅವರ ಜೀವನಾದರ್ಶ, ತತ್ವ, ಸಿದ್ಧಾಂತ, ಮೌಲ್ಯಗಳನ್ನು ಜಗತ್ತಿಗೆ ಪಸರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ-ಕೇಂದ್ರದ ನಾಯಕರು ಗಮನ ಹರಿಸಬೇಕು ಎಂದಿದ್ದಾರೆ.



