ಗದಗ: ಚಿನ್ನದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಗಣರಾಜ್ಯೋತ್ಸವದ ಬಂಪರ್ ಗಿಫ್ಟ್ ಘೋಷಿಸಲಾಗಿದೆ. ಸಚಿವ ಎಚ್ ಕೆ ಪಾಟೀಲ್ ಅವರು ಗದಗ ನಗರದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಜನವರಿ 10 ರಂದು ಮನೆ ಪಾಯ ಅಗೆಯುವ ವೇಳೆ ಗದಗ ಜಿಲ್ಲೆಯ 466 ಗ್ರಾಮದ ಪುರಾತನ ಚಿನ್ನದ ಒಡವೆಗಳ ತಂಬಿಗೆ ಪತ್ತೆಯಾಗಿತ್ತು. ಈ ಅಮೂಲ್ಯ ಚಿನ್ನವನ್ನು ಪ್ರಜ್ವಲ್ ರಿತ್ತಿ ಕುಟುಂಬ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿತ್ತು. ಈ ಪ್ರಾಮಾಣಿಕತೆಗೆ ಸರ್ಕಾರ ವಿಶೇಷ ಗೌರವ ತೋರಿದೆ.
ಸಚಿವ ಎಚ್ ಕೆ ಪಾಟೀಲ್ ಅವರು ಘೋಷಣೆ ಮಾಡಿದಂತೆ, ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕೆ ₹5 ಲಕ್ಷ ನಗದು ಸಹಾಯ ಮತ್ತು ತಾಯಿ ಕಸ್ತೂರೆವ್ವ ಅವರಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ.
ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಕ ಪ್ರಜ್ವಲ್ ರಿತ್ತಿ ಮತ್ತು ತಾಯಿ ಕಸ್ತೂರೆವ್ವ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ವೇಳೆ ಸಚಿವರು ನಿವೇಶನದ ಪ್ರಮಾಣ ಪತ್ರ ಮತ್ತು ಕಸ್ತೂರೆವ್ವ ಅವರಿಗೆ ಉದ್ಯೋಗ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಸರ್ಕಾರದ ಈ ನಿರ್ಧಾರವನ್ನು ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ರಾಮಾಣಿಕತೆಗೆ ದೊರಕಿದ ಅತ್ಯುತ್ತಮ ಗೌರವ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.



