ಬೆಂಗಳೂರು;– ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವಧನ ಬಿಡುಗಡೆ ಮಾಡುವ ಕುರಿತು ಶಾಸಕ ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತ್‌ಗಳು ಗ್ರಾಮೀಣ ಭಾಗದ ಸರ್ಕಾರಗಳಾಗಿವೆ. ರಾಜ್ಯದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅವರ ಬೇಕು ಬೇಡಗಳನ್ನು ಈಡೇರಿಸುವ ಮಹತ್ವದ ಸಂಸ್ಥೆಗಳಾಗಿವೆ. ಗ್ರಾಮ ಪಂಚಾಯಿತಿಗಳಿಂದ ನಡೆಯುವ ಗ್ರಾಮ ಸಭೆಗಳ ಮೂಲಕ ಪ್ರಜಾಪ್ರಭುತ್ವದ ನಿಜವಾದ ಅರ್ಥ ಸಾಕಾರವಾಗುತ್ತಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಈ ವ್ಯವಸ್ಥೆಯ ಪ್ರಮುಖ ಆಧಾರ ಸ್ತಂಭವಾಗಿದ್ದಾರೆ. ಆದರೆ, ಇವರಿಗೆ ಸಮರ್ಪಕವಾಗಿ ವೇತನ ಬರದಿದ್ದರೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸರ್ಕಾರ ತುರ್ತು ಗಮನ ಹರಿಸಬೇಕಿದೆ.
ಗ್ರಾಪಂ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷನಾಗುವುದನ್ನು ಒಂದು ಸೇವೆ ಎಂದು ಪರಿಗಣಿಸಿದ್ದರೂ, ಅವರ ಕನಿಷ್ಠ ಖರ್ಚು ವೆಚ್ಚಗಳಿಗೆ ಸರ್ಕಾರದಿಂದ ಗೌರವಧನ ನೀಡಲಾಗುತ್ತಿದೆ. ಸದಸ್ಯರಿಗೆ ಮಾಸಿಕ ತಲಾ 2 ಸಾವಿರ ರೂಪಾಯಿ, ಉಪಾಧ್ಯಕ್ಷರಿಗೆ ಮಾಸಿಕ ತಲಾ 3 ಸಾವಿರ ರೂಪಾಯಿ ಹಾಗೂ ಅಧ್ಯಕ್ಷರಿಗೆ ಮಾಸಿಕ ತಲಾ 6 ಸಾವಿರ ರೂಪಾಯಿ ಗೌರವಧನವನ್ನು ನೀಡಲಾಗುತ್ತಿದೆ. ಆರ್ಥಿಕವಾಗಿ ಸಬಲರಲ್ಲದ ಗ್ರಾಮೀಣ ಜನಪ್ರತಿನಿಧಿಗಳಿಗೆ ಈ ಮೊತ್ತವು ತುಂಬಾ ಅವಶ್ಯ ಕೂಡ ಆಗಿದೆ.
ಆದರೆ, ರಾಜ್ಯದ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷರ ಮಾಸಿಕ ಗೌರವಧನವನ್ನು ಕಳೆದ ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ತಿಂಗಳುಗಳವರೆಗೆ (07 ತಿಂಗಳು) ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ಸದಸ್ಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಜತೆಗೆ ಅವರು ಆಡಳಿತ ವ್ಯವಸ್ಥೆಯಲ್ಲಿ ಆಸಕ್ತಿ ಕಳೆದುಕೊಳ್ಳುವ ಅಪಾಯವೂ ಇದೆ. ಹೀಗಾದಲ್ಲಿ ಸರ್ಕಾರದ ಮೂಲ ಆಶಯಕ್ಕೆ ಧಕ್ಕೆ ಬರುತ್ತದೆ. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಇವೇ ತಮ್ಮ ಜವಾಬ್ದಾರಿಗಳಿಂದ ವಿಮುಖರಾದರೆ ಅಭಿವೃದ್ಧಿ ಕಾರ್ಯಗಳು ಮತ್ತಷ್ಟ ಕುಂಠಿತಗೊಳ್ಳುವ ಅಪಾಯ ಇದೆ. ಅಲ್ಲದೆ, ಗ್ರಾಮ ಪಂಚಾಯತ್‌ಗಳ ಆಡಳಿತ ನಿರ್ವಹಣೆ, ಸಾರ್ವಜನಿಕ ಕೆಲಸ ಕಾರ್ಯಗಳು ಕುಂಠಿತಗೊಂಡಿರುತ್ತವೆ.
ಗ್ರಾಮ ಪಂಚಾಯತ್‌ಗಳ ಹೊಣೆಗಾರಿಕೆಯಲ್ಲಿ ಒದಗಿಸಲಾಗುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಪರಿಸರ ನೈರ್ಮಲ್ಯ ಹಾಗೂ ನರೇಗಾದಂತಹ ಜನೋಪಯೋಗಿ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು, ಜನರಿಗೆ ತಲುಪಿಸುವುದು ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಯನ್ನು ಗ್ರಾಪಂ ಜನಪ್ರತಿನಿಧಿಗಳು ಉತ್ಸಾಹದಿಂದ ಮಾಡುವಂತೆ ಮಾಡಬೇಕಿದೆ. ಅಲ್ಲದೆ, ಆರ್ಥಿಕ ಸಮಸ್ಯೆಯಿಂದ ದೂರದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಇವರು ಖುದ್ದು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ.
ಸದ್ಯ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ ಇರುವ ಕಾರಣ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಿಗೂ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರಿಲ್ಲ. ಇದರಿಂದ ಗ್ರಾಮ ಪಂಚಾಯತ್ ಆಡಳಿತವೇ ಜನರಿಗೆ ಸ್ಪಂದಿಸಬೇಕಿದೆ.
ರಾಜ್ಯದಲ್ಲಿ ಸದ್ಯ 6022 ಗ್ರಾಮ ಪಂಚಾಯತ್‌ಗಳಿದ್ದು, ಅಷ್ಟೇ ಸಂಖ್ಯೆಯ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸುಮಾರು 90 ಸಾವಿರದಷ್ಟು ಸದಸ್ಯರಿದ್ದಾರೆ. ಅವರಿಗೆ ಪ್ರತಿ ತಿಂಗಳು ಗೌರವಧನ ನೀಡಲು ದಯಮಾಡಿ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡುವಂತೆ ಈ ಪತ್ರದ ಮುಖೇನ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಪರವಾಗಿ ಕೋರಲಾಗಿದೆ ಎಂದು ಬರೆದಿದ್ದಾರೆ.