HomeGadag Newsಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಬೇಕು

ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಬೇಕು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮ ಸ್ವರಾಜ ಪರಿಕಲ್ಪನೆ ಗಾಂಧೀಜಿಯವರ ಕನಸಾಗಿತ್ತು. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಬೇಕು. ಅಲ್ಲಿ ವಾಸಿಸುವವರ ಬದುಕಿನ ಗುಣಮಟ್ಟ ಉನ್ನತವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಕೆ.ಎಚ್. ಪಾಟೀಲ ಪ್ರತಿಷ್ಠಾನ ಹಾಗೂ ವಿವೇಕ ಪಥ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ `ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ’ ಹಾಗೂ `ವಿವೇಕ ಪಥ’ ಅನುಷ್ಠಾನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಗ್ರಾಮ ಸ್ವರಾಜ ಕಾನೂನುಗಳನ್ನು ಮಾಡಲಾಗಿದೆ. ಅವುಗಳ ಅನುಷ್ಠಾನ ಸ್ಥಳೀಯ ಮಟ್ಟದಿಂದ ಜಾರಿಗೊಳಿಸುವ ಮೂಲಕ ಗ್ರಾಮ ಪಂಚಾಯಿತಿಗಳು ಸರ್ಕಾರಗಳಂತೆ ಕಾರ್ಯನಿರ್ವಹಿಸಬೇಕಿದೆ ಎಂದರು.

ಗದಗ ಜಿಲ್ಲೆ ಒಂದು ರೀತಿಯಲ್ಲಿ ಪ್ರಯೋಗಶಾಲೆ ಇದ್ದಂತೆ. ಎಲ್ಲ ಯೋಜನೆಗಳ ಅನುಷ್ಠಾನ ಜಿಲ್ಲೆಯ ಮೂಲಕವೇ ಆರಂಭಗೊಳ್ಳುತ್ತದೆ. ಅದೇ ರೀತಿ ಗ್ರಾಮ ಸ್ವರಾಜ ಕಾನೂನು ಸಹ ಜಿಲ್ಲೆಯಿಂದಲೇ ಸರಿಯಾಗಿ ಅನುಷ್ಠಾನವಾಗಲಿ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಡವರ ಬದುಕು ಸುಸ್ಥಿರಗೊಳಿಸಿದೆ. ಕುಟುಂಬದ ಸುಭದ್ರ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆಯಲ್ಲದೇ ರಾಜ್ಯದಲ್ಲಿನ ಬಡತನ ನಿವಾರಣೆಯಾಗಿದೆ. ಪಂಚ ಗ್ಯಾರಂಟಿಗಳ ಮೂಲಕ ಬಡತನವನ್ನು ಬೇರು ಸಮೇತ ಕರ್ನಾಟಕ ರಾಜ್ಯದಲ್ಲಿ ಕಿತ್ತೊಗೆಯಲಾಗಿದೆ. ಜಿಲ್ಲೆ ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಅರ್ಹರಿಗೆ ಯೋಜನೆಗಳನ್ನು ಹೆಚ್ಚು ಹೆಚ್ಚು ತಲುಪಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲರು ಸಚಿವರಾಗುವವರೆಗೂ ಗ್ರಾಮದ ಸರಪಂಚರಾಗಿ ನಿರಂತರವಾಗಿ ಹಲವು ವರ್ಷಗಳವರೆಗೆ ಕಾರ್ಯನಿರ್ವಹಿಸಿ ಗ್ರಾಮಗಳ ಅಭಿವೃದ್ಧಿಗೋಸ್ಕರ ಶ್ರಮಿಸಿದ್ದಾರೆ. ಗ್ರಾಮ ಸ್ವರಾಜ ಕಾನೂನನ್ನು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನಗೊಳಿಸೋಣ. ವಾರ್ಡ್ ಹಾಗೂ ಗ್ರಾಮ ಸಭೆಗಳನ್ನು ಆಗಸ್ಟ್ 15ರೊಳಗಾಗಿ ನಡೆಸಿ ಗ್ರಾ.ಪಂ ಹಾಗೂ ನಗರಸಭೆಗಳಿಗೆ ವರದಿ ಕಳುಹಿಸಬೇಕು. ನಂತರ ಅಲ್ಲಿಂದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ನಾವೆಲ್ಲರೂ ನಮ್ಮ ಗ್ರಾಮಗಳ ಶಾಲೆಗಳ ಶೌಚಾಲಯ ದುರಸ್ತಿಯನ್ನು ಅಚ್ಚುಕಟ್ಟಾಗಿ ಅಕ್ಟೋಬರ್ 2ರೊಳಗಾಗಿ ಪೂರ್ಣಗೊಳಿಸುತ್ತೇವೆಂದು ದೃಢನಿರ್ಧಾರ ಕೈಗೊಳ್ಳೋಣ ಎಂದರು.

ಸಹಕಾರ ರೇಡಿಯೋ ನಿಲಯ ನಿರ್ದೇಶಕ ಜೆ.ಕೆ. ಜಮಾದಾರ ಗಾಂಧೀಜಿ ಕನಸಿನ ಗ್ರಾಮ ಸ್ವರಾಜ ಹಾಗೂ ವಿವೇಕ ಪಥದ ಉದ್ದೇಶ ಹಾಗೂ ಆಶಯಗಳನ್ನು ವಿವರವಾಗಿ ತಿಳಿಸಿಕೊಟ್ಟರು. ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗ್ಯಾರಂಟಿ ಯೋಜನೆಗಳ ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರ, ವಿದ್ಯಾಧರ ದೊಡ್ಡಮನಿ, ನೀಲಮ್ಮ ಬೋಳನವರ, ವೀರಣ್ಣ ಹುಣಸಿಕಟ್ಟಿ, ಸಿದ್ಧಲಿಂಗೇಶ್ವರ ಪಾಟೀಲ, ಕೃಷ್ಣಗೌಡ ಪಾಟೀಲ, ಅಬ್ದುಲ್ ಕರೀಂ ಸಾಬ, ಶಕುಂತಲಾ ಅಕ್ಕಿ, ಎ.ಎನ್. ನಾಗರಹಳ್ಳಿ, ಎಂ.ಎ. ರಡ್ಡೇರ, ತಾಲೂಕು ಕಾರ್ಯನಿರ್ವಹಣಾದಿಕಾರಿ ಮಲ್ಲಯ್ಯ ಕೆ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹಿರಾಲಾಲ ಜಿನಗಾ ಸೇರಿದಂತೆ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

“ಮುಖ್ಯಮಂತ್ರಿಗಳು ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಶಾಸಕರ ಸಭೆ ಜರುಗಿಸಿದರು. ಜಿಲ್ಲೆಗೆ ಅಗತ್ಯವಿರುವ ಅನುದಾನ, ಯೋಜನೆಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ವೇಳೆ ಶಾಸಕರಾದ ಜಿ.ಎಸ್. ಪಾಟೀಲರು ನಮ್ಮೊಂದಿಗಿದ್ದರು. ಗದಗ ಜಿಲ್ಲೆಯ ಸರ್ಕಾರಿ ಶಾಲೆಗಳ ಶೌಚಾಲಯಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಯೋಜನೆ ರೂಪಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿ, ಶೌಚಾಲಯಗಳ ನಿರ್ಮಾಣ ಹಾಗೂ ದುರಸ್ತಿಗಾಗಿ 50 ಕೋಟಿ ರೂ ಅನುದಾನ ಜಿಲ್ಲೆಗೆ ನೀಡುವಂತೆ ಕೋರಲಾಗಿದೆ”

ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.

ಯಾವುದೇ ಯೋಜನೆಯನ್ನು ಶಿಸ್ತುಬದ್ಧವಾಗಿ ರೂಪಿಸಿ ಅನುಷ್ಠಾನಗೊಳಿಸಿದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ನೈಜ ಉದಾಹರಣೆ ಶುದ್ಧ ಕುಡಿಯುವ ನೀರಿನ ಯೋಜನೆ. ಅದೇ ತರಹ ಗ್ರಾಮ ಸ್ವರಾಜ ಕಾನೂನು ಶೇ 100ರಷ್ಟು ಅನುಷ್ಠಾನವಾಗಲಿ. ಪ್ರಭುವಿನೆಡೆಗೆ ಪ್ರಭುತ್ವ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲು ಚಿಂತನೆ ನಡೆದಿದ್ದು, ಆಗಸ್ಟ್ 15ರಿಂದ ಆರಂಭಗೊಳಿಸಲಾಗುವುದು. ಜಿಲ್ಲೆಯ ಗ್ರಾಮಗಳು ವ್ಯಸನಮುಕ್ತ, ವ್ಯಾಜ್ಯಮುಕ್ತ, ಬಹಿರ್ದೆಸೆ ಮುಕ್ತವಾಗಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಿ ಯಶಸ್ವಿಯಾಗೋಣ ಎಂದು ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!