ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕು ಪಂಚಾಯಿತಿ ವ್ಯಾಪ್ತಿಯ ಲಕ್ಕುಂಡಿ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಆಚರಿಸಿ, 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ಹಾಗೂ ಕ್ರಿಯಾಯೋಜನೆ ತಯಾರಿಸುವ ಕುರಿತು ಗ್ರಾಮ ಸಭೆ ಜರುಗಿತು.
ಇದೇ ಸಂದರ್ಭದಲ್ಲಿ `ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನಕ್ಕೆ ನರೇಗಾ ವಯಕ್ತಿಕ ಕಾಮಗಾರಿ ಮಾಹಿತಿಯುಳ್ಳ ಕರಪತ್ರವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿ, ಗಂಡು-ಹೆಣ್ಣಿಗೆ ಸಮಾನ ಕೂಲಿ ಪ್ರತಿ ದಿನಕ್ಕೆ -349 ರೂ, ಸರಕಾರ ನಿಗದಿಪಡಿಸಿದ ಕೆಲಸದ ಅಳತೆ ನಿಗದಿ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿಯಲ್ಲಿ ದೊರೆಯುವ ವಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಗರಿಗೆ ಮತ್ತು ವಿಶೇಷ ಚೇತನರಿಗೆ ಶೇ. 50ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸಬೇಕಾದ ಸೌಲಭ್ಯಗಳು ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ ಅಧ್ಯಕ್ಷ ಕೆಂಚಪ್ಪ ಪೂಜಾರ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ನರೇಗಾದಡಿ ಕೆಲಸ ಪಡೆದು ತಮ್ಮೂರಲ್ಲೇ ನೆಲೆಸಬೇಕು. ಪ್ರತಿಯೊಬ್ಬರೂ ೧೦೦ ಮಾನವ ದಿನಗಳ ಕೆಲಸ ಪಡೆಯಬೇಕು ಮತ್ತು ಪ್ರತಿ ವರ್ಷ ನರೇಗಾದಡಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂದು ತಿಳಿಸಿದರು.
ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ಪ್ರತಿಯೊಬ್ಬರೂ ನರೇಗಾ ಯೋಜನೆಯ ಸದುಪಯೋಗವನ್ನು ಪಡೆಯಬೇಕು. ನರೇಗಾ ಯೋಜನೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ ಮೀನುಗಾರಿಕೆ ಇಲಾಖೆಯಲ್ಲಿನ ಕಾಮಗಾರಿಗಳ ಸದುಪಯೋಗ ಪಡೆಯಬಹುದು. ಇನ್ನು ಮಹಿಳೆಯರು ನರೇಗಾ ಯೋಜನೆಯಲ್ಲಿ ಹೆಚ್ಚು ಭಾಗವಹಿಸಬೇಕು. ಅದರ ಜೊತೆಗೆ ವಯಕ್ತಿಕ ಕಾಮಗಾರಿಯನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.