HomeGadag Newsವಚನಗಳು ಶರಣರು ನೀಡಿದ ಬಹುದೊಡ್ಡ ಕೊಡುಗೆ: ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು

ವಚನಗಳು ಶರಣರು ನೀಡಿದ ಬಹುದೊಡ್ಡ ಕೊಡುಗೆ: ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಚನ ಸಾಹಿತ್ಯ ಎಂಬುದು ವಿಶ್ವದ ಶ್ರೇಷ್ಠ ಅನುಭಾವ ಸಾಹಿತ್ಯವಾಗಿರುವುದರಿಂದ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದೆಂದು ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಅವರು ನಗರದ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ನಡೆದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಸಂವಿಧಾನದ ಆಶಯಗಳೆಲ್ಲ ವಚನ ಸಾಹಿತ್ಯದಲ್ಲಿವೆ. ವಚನ ಸಾಹಿತ್ಯವನ್ನು ಸರಿಯಾಗಿ ಅಧ್ಯಯನ ಮಾಡಿದರೆ ಸಮಾಜದಲ್ಲಿರುವ ಮೌಢ್ಯತೆಗಳನ್ನು, ಕಂದಾಚಾರಗಳನ್ನು ಹೋಗಲಾಡಿಸಿ ಸಮಾಜವನ್ನು ಸರ್ವ ವಿಧದಿಂದಲೂ ಸಶಕ್ತಗೊಳಿಸಬಹುದು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಕೆ.ಎ. ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತು ಜಿಲ್ಲೆಯಲ್ಲಿ ನಡೆದು ಬಂದ ದಾರಿಯ ಕುರಿತು ಸಿಂಹಾವಲೋಕನ ಮಾಡಿದರು.

ಕಾರ್ಯಕ್ರಮವನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ್ ಉದ್ಘಾಟಿಸಿ ಮಾತನಾಡಿ, ಶರಣರ ಜೀವನ ಆದರ್ಶಗಳನ್ನು, ವಚನಗಳ ತತ್ವ-ಸಿದ್ಧಾಂತಗಳನ್ನು ಮನೆಮನೆಗಳಿಗೆ ತಲುಪಿಸಬೇಕು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ವಚನಗಳಲ್ಲಿರುವ ಮೌಲ್ಯಗಳನ್ನು ತಿಳಿಸುವ ಗುರುತರವಾದ ಜವಾಬ್ದಾರಿಯನ್ನು ನೂತನ ಪದಾಧಿಕಾರಿಗಳು ನಡೆಸಿಕೊಡಬೇಕು. ಪರಿಷತ್ತು ಹಾಕಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲೂ ನನ್ನ ಸಹಕಾರವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ತಮ್ಮ ಮಕ್ಕಳಿಗೆ ವಚನಗಳನ್ನು ಕಲಿಸಿ ಶರಣರ ಜೀವನಾರ್ಶನಗಳನ್ನು ತಿಳಿಸಿ ಸಂಸ್ಕಾರವನ್ನು ಕಲಿಸುವ ಗುರುತರವಾದ ಜವಾಬ್ದಾರಿಯನ್ನು ವಹಿಸಬೇಕು ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ, ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಇದ್ದರು. ಈ ವೇಳೆ ಯು.ಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 434ನೇ ರ‍್ಯಾಂಕ್ ಪಡೆದ ಯಲ್ಲಪ್ಪ ಗೋಶ್ಯಾಲ್ಲನವರ ಹಾಗೂ ಹತ್ತು ಜನ ನೂತನ ದತ್ತಿ ದಾನಿಗಳನ್ನು ಸನ್ಮಾನಿಸಲಾಯಿತು.

ಜಗದ್ಗುರುಗಳು ನೂತನ ಅಧ್ಯಕ್ಷರಿಗೆ ಪರಿಷತ್ತಿನ ಧ್ವಜವನ್ನು ಹಸ್ತಾಂತರಿಸಿದರು. ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಶ.ಸಾ.ಪ ಮಾಜಿ ಅಧ್ಯಕ್ಷ ಎ.ಓ. ಪಾಟೀಲ್, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರು, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ್, ಆರ್.ಎಲ್. ಪೊಲೀಸ್‌ಪಾಟೀಲ್, ಡಾ. ಎಸ್.ಸಿ. ಚವಡಿ, ವೀರೇಶ ಬಾದಾಮಿ, ಶೇಖಣ್ಣ ಕಳಸಾಪುರ, ಎಂ.ಕೆ. ಲಮಾಣಿ, ಚಾಂದಸಾಬ್ ಮುಳುಗುಂದ, ಲೀಲಕ್ಕ ಹಸಬಿ, ಜಾಬಣ್ಣವರ, ಬಸವರಾಜ್ ಕೋಟಗಿ ಸೇರಿದಂತೆ ಶ.ಸಾ.ಪ ತಾಲೂಕಾ ಪದಾಧಿಕಾರಿಗಳು ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳು ಭಾಗವಹಿಸಿದ್ದರು.

ನೀಲಮ್ಮ ಕುಳಗೇರಿ ಹಾಗೂ ರೇಣುಕಾ ಲಕ್ಕುಂಡಿ ವಚನ ಗಾಯನ ಪ್ರಸ್ತುತಪಡಿಸಿ ನಿರೂಪಣೆ ಮಾಡಿದರೆ, ವರ್ಷಾ ಬಾರಕೇರ ಕಾರ್ಯಕ್ರಮ ನಿರ್ವಹಿಸಿದರು.

ನಾಡಿನ ಹೆಸರಾಂತ ಮಹಿಳಾ ಸಾಹಿತಿ ನಾಡೋಜ ಡಾ. ಮೀನಾಕ್ಷಿ ಬಾಳಿ ಉಪನ್ಯಾಸ ನೀಡಿ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ‍್ಯವಿಲ್ಲದ ಕಾಲದಲ್ಲಿ ಇಷ್ಟಲಿಂಗವನ್ನು ಜನಸಾಮಾನ್ಯರ ಹಸ್ತಕ್ಕಿರಿಸಿ ಅದರ ಉಪಾಸನೆ ಮಾಡುವುದರ ಮೂಲಕ ಎಲ್ಲರೂ ದೈವತ್ವವನ್ನು ಸಾಧಿಸಬಹುದು ಎಂದು ಬಸವಣ್ಣನವರು ಮನುಕುಲಕ್ಕೆ ತಿಳಿಸಿದ್ದಾರೆ. ಕರ್ನಾಟಕ ಸರಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!