ನವದೆಹಲಿ: 2026ರ ಗಣರಾಜ್ಯೋತ್ಸವದ ಸಂಭ್ರಮದಂದು ದೇಶವು ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನ ಮಾಡಿದರು.
ಬಾಹ್ಯಾಕಾಶದಲ್ಲಿ ಭಾರತದ ಪತಾಕೆಯನ್ನು ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದ ಮಹತ್ತರ ಸಾಧನೆಗಾಗಿ ಮತ್ತು ತೋರಿದ ಅಪಾರ ಧೈರ್ಯಕ್ಕಾಗಿ ಈ ಗೌರವವನ್ನು ಶುಭಾಂಶು ಶುಕ್ಲಾ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿ ಅವರು ರಾಷ್ಟ್ರಕ್ಕಾಗಿ ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸುತ್ತದೆ.
ಅಶೋಕ ಚಕ್ರವು ಯುದ್ಧಭೂಮಿಯ ಹೊರಗೆ ತೋರಿದ ಅದ್ಭುತ ಸಾಹಸ, ಆತ್ಮತ್ಯಾಗ ಅಥವಾ ಧೈರ್ಯಕ್ಕಾಗಿ ಸೈನಿಕರು ಮತ್ತು ನಾಗರಿಕರಿಗೆ ನೀಡಲಾಗುವ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಇದು ಯುದ್ಧಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರಕ್ಕೆ ಸಮಾನವಾಗಿದೆ.
ಶುಭಾಂಶು ಶುಕ್ಲಾ ಅವರು ಆಕ್ಸಿಯಮ್–4 (Axiom-4) ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿ 2025ರ ಜೂನ್ 25ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದ್ದರು. ಅಲ್ಲಿ ಸುಮಾರು 18 ದಿನಗಳ ಕಾಲ ಉಳಿದು, ಜುಲೈ 15ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದರು.
ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಅವರು ಇತರ ವಿಜ್ಞಾನಿಗಳೊಂದಿಗೆ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದು, ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಿದ್ದಾರೆ. ಈ ಮಿಷನ್‌ನಲ್ಲಿ ಶುಭಾಂಶು ಶುಕ್ಲಾ ಅವರೊಂದಿಗೆ ಕಮಾಂಡರ್ ಪೆಗ್ಗಿ ವಿಟ್ಸನ್ (ಅಮೆರಿಕ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ–ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಕೂಡ ಭಾಗವಹಿಸಿದ್ದರು. ಎಲ್ಲಾ ಸದಸ್ಯರು ಯಶಸ್ವಿಯಾಗಿ ಭೂಮಿಗೆ ವಾಪಸ್ ಆಗಿದ್ದಾರೆ.



