ಮೈಸೂರು:- ಗ್ರೇಟರ್ ಬೆಂಗಳೂರು ಚುನಾವಣೆಗೆ ಮುಂದಿನ ನಾಲ್ಕು ತಿಂಗಳಲ್ಲಿ ಸಿದ್ಧತೆ ನಡೆಸಲಾಗುವುದು ಎಂದು DCM ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, “ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ ನಡೆಸಲಾಗುವುದು. ಮೊದಲು ಮೀಸಲಾತಿ ಹಾಗೂ ವಲಯವಾರು ವಿಭಾಗಗಳನ್ನು ರಚಿಸಲಾಗುವುದು. ಚುನಾವಣೆ ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರಕಿದ್ದು ಚುನಾವಣೆ ಯಾವಾಗ ನಡೆಸಲಾಗುತ್ತದೆ ಎಂದು ಕೇಳಿದಾಗ, “ಈ ಬಗ್ಗೆ ಸರ್ವಪಕ್ಷ ಸಭೆ ನಡೆಸಲಾಗುವುದು. ಯಾವ ರೀತಿ ವಿಭಾಗಗಳನ್ನು ಮಾಡಬೇಕು ಎಂದು ಅವರ ಬಳಿಯೂ ಸಲಹೆ ಕೇಳಲಾಗುವುದು. ಸದನದಲ್ಲಿಈ ಬಗ್ಗೆ ಎಲ್ಲರೂ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕ್ಯಾಬಿನೆಟ್ ಉಪ ಸಮಿತಿ ರಚನೆ ಮಾಡಲಾಗಿತ್ತು. ಅವರ ಶೇ 90 ರಷ್ಟು ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ ನಡೆಸಲಾಗುವುದು. ಹೊಸ ಪ್ರದೇಶಗಳನ್ನು ಸೇರಿಸಲು ವಿಳಂಬವಾಗುತ್ತದೆ. ಈಗ ಹೇಗಿದೆಯೋ ಅದೇ ರೀತಿ ಮುಂದುವರೆಯಲಾಗುವುದು” ಎಂದು ತಿಳಿಸಿದರು.



