ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಮಹದಾಯಿ ಯೋಜನೆ ರೂಪಿಸಿದ್ದು, 2018ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಮಾನಿಸಿದಂತೆ 13.42 ಟಿ.ಎಂ.ಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಕ್ಲಿಯರೆನ್ಸ್ ನೀಡದೆ ಅಸಹಕಾರ ತೋರುತ್ತಿದೆ. ನಾವು ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿಕೊಂಡು ಕಾಯುತ್ತಿದ್ದೇವೆ. ಹೀಗಾಗಿ ವಿಪಕ್ಷಗಳು ಕೂಡ ಕೇಂದ್ರ ಸರ್ಕಾರದ ಮನವೊಲಿಸಿ, ಯೋಜನೆಗೆ ಕ್ಲಿಯರೆನ್ಸ್ ಕೊಡುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಸರ್ಕಾರದ ಪರವಾಗಿ ವಿಧಾನಸಭೆಯಲ್ಲಿ ಶುಕ್ರವಾರ ಅವರು ಉತ್ತರ ನೀಡಿದರು.
ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆಯಲ್ಲಿ ನಮಗೆ 173 ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದು, ಆಲಮಟ್ಟಿ ಜಲಾಶಯವನ್ನು 519 ಮೀನಿಂದ 524 ಮೀಗೆ ಹೆಚ್ಚಿಸಲು ಈಗಾಗಲೇ ಅನುಮತಿ ದೊರೆತಿದೆ. ಇದುವರೆಗೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಯೋಜನೆಗೆ 75 ಸಾವಿರ ಹೆ. ಭೂಮಿಯನ್ನು ಒಂದೇ ಹಂತದಲ್ಲಿ ಸ್ವಾಧೀನಪಡಿಸಿಕೊಂಡು, ತರಿ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 40 ಲಕ್ಷ ರೂ., ಹಾಗೂ ಖುಷ್ಕಿ ಭೂಮಿಗೆ 30 ಲಕ್ಷ ರೂ. ಕೊಡಲು ನಾವು ಸಿದ್ಧರಿದ್ದು, ಈಗಾಗಲೇ ರೈತರೂ ಒಪ್ಪಿಕೊಂಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಒದಗಿಸಲು ನಾವು ಸಿದ್ಧರಿದ್ದೇವೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ನಮ್ಮದು ಎಂದರು.
ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳಲು 2001ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಆರ್ಥಿಕ ತಜ್ಞ ಪ್ರೊ. ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅವರಿಂದ 2002ರಲ್ಲಿ ವರದಿ ಪಡೆಯಲಾಗಿತ್ತು. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ 39 ತಾಲೂಕು, ಅತಿ ಹಿಂದುಳಿದ 40 ತಾಲೂಕು ಹಾಗೂ 35 ಹಿಂದುಳಿದ ತಾಲೂಕು ಸೇರಿದಂತೆ ಒಟ್ಟು 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ತಿಳಿಸಿದ್ದರು. ಈ ಪೈಕಿ 27 ತಾಲೂಕುಗಳು ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿವೆ. ಈ ತಾಲ್ಲೂಕುಗಳನ್ನು ಅಭಿವೃದ್ಧಿಪಡಿಸಲು 8 ವರ್ಷಗಳಲ್ಲಿ 31 ಸಾವಿರ ಕೋಟಿ ರೂ. ಒದಗಿಸಿ, ಅಸಮತೋಲನ ನಿವಾರಿಸಬೇಕು ಎಂದಿದ್ದರು.
ಆದರೆ 31 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಹಣ ಹಿಂದುಳಿದ ತಾಲೂಕುಗಳಲ್ಲಿ ಖರ್ಚಾಗಿದೆ. ನಂಜುಂಡಪ್ಪ ಅವರ ವರದಿಯಂತೆ ಹಿಂದುಳಿದ ತಾಲೂಕುಗಳಿಗೆ ಹಣ ನೀಡಿ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಇದರ ಬಳಿಕ ಈ ತಾಲೂಕುಗಳಲ್ಲಿ ಅಭಿವೃದ್ಧಿಯಾಗಿವೆಯೇ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಿದೆ ಎಂದು ತೀರ್ಮಾನಿಸಿ ಉತ್ತರ ಕರ್ನಾಟಕದವರೇ ಆದ ಹಿರಿಯ ಆರ್ಥಿಕ ತಜ್ಞ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇವೆ. ಜನವರಿ ತಿಂಗಳ ಅಂತ್ಯದೊಳಗೆ ಈ ಸಮಿತಿಯು ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಡುವೆ ಇರುವ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನಮ್ಮ ಸರ್ಕಾರ ಬದ್ಧವಿದ್ದು, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.



