ಸರ್ಕಾರಗಳು ರೈತರ ಹಿತ ಕಾಪಾಡುತ್ತಿಲ್ಲ : ಚನ್ನಪ್ಪ ಪೂಜಾರಿ

0
Green Sena state president Channappa Pujari accused in a press conference
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರೈತರ ಬಗ್ಗೆ ಕಾಳಜಿ ಇರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರೈತರ ಕಲ್ಯಾಣದ ನಿರೀಕ್ಷೆ ಇತ್ತು. ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿ ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ಹಾಗೆಯೇ ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾದರೂ ಸ್ವಾಮಿನಾಥನ್ ವರದಿ ಜಾರಿಗೊಳಿಸಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚನ್ನಪ್ಪ ಪೂಜಾರಿ ಹೇಳಿದರು.

Advertisement

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದ ಶೇ. 75ರಷ್ಟು ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಸರಕಾರದ ಈ ರೈತ ವಿರೋಧಿ ನೀತಿಯನ್ನು ಖಂಡಿಸಿ ಶೀಘ್ರವೇ ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ದಿ. ಕೆ.ಎಚ್. ಪಾಟೀಲರು ರೈತರ ಅನುಕೂಲಕ್ಕಾಗಿ ರೈತ ಭವನ ನಿರ್ಮಿಸಿದರು. ಆದರೆ ಆ ಕಟ್ಟಡದಲ್ಲಿ ಬೇರೆ ಬೇರೆ ಸರಕಾರಿ ಕಚೇರಿಗಳೇ ಹೆಚ್ಚು ಕಾರ್ಯನಿರ್ವಹಿಸಿವೆ. ರೈತರಿಗೆ ಕುಳಿತುಕೊಳ್ಳಲು ಸಣ್ಣ ಜಾಗವೂ ಇಲ್ಲ. ಇನ್ನಾದರೂ ರೈತ ಭವನ ರೈತರಿಗೆ ಮೀಸಲಾಗಲಿ ಎಂದು ಚನ್ನಪ್ಪ ಪೂಜಾರಿ ಒತ್ತಾಯಿಸಿದರು.

ಗದಗ ಜಿಲ್ಲೆಯಲ್ಲಿ ಈವರೆಗೆ ಹೆಸರುಕಾಳು ಖರೀದಿ ಕೇಂದ್ರ ಆರಂಭವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ತಾಂತ್ರಿಕ ಕಾರಣದ ನೆಪ ಹೇಳುತ್ತಿದ್ದಾರೆ. ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಯಾದ ಸಿಂಗಟಾಲೂರ ಏತ ನೀರಾವರಿ ಯೋಜನೆ ಈವರೆಗೂ ಪೂರ್ಣಗೊಂಡು ಕೊನೆ ಭಾಗದ ಹಳ್ಳಿಗಳಿಗೆ ನೀರು ಹೋಗುತ್ತಿಲ್ಲ. ಇದೆಲ್ಲವನ್ನು ಖಂಡಿಸಿ, ಎಲ್ಲ ರೈತ ಪರ ಸಂಘಟನೆಗಳನ್ನು ಒಗ್ಗೂಡಿಕೊಂಡು ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹೇಶಗೌಡ ಸುಬೇದಾರ, ಸುರೇಶ ಪರಗಣ್ಣವರ, ಕಿಶನ್ ನಂದಿ, ಶರಣಪ್ಪ ಮರಳಿ, ಚಂದನಗೌಡ ಪಾಟೀಲ, ವಿಜಯಕುಮಾರ ಸುಂಕದ, ಬಸವರಾಜ ಮಾಳಿಕಾಯಿ ಇತರರು ಉಪಸ್ಥಿತರಿದ್ದರು.

ಅತಿವೃಷ್ಟಿ, ಅನಾವೃಷ್ಟಿ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ವಿರೋಧ ಪಕ್ಷಗಳು ಸಹ ರಾಜಕೀಯ ಕಾರಣಕ್ಕೆ ಪಾದಯಾತ್ರೆ ನಡೆಸುತ್ತಿವೆಯೇ ಹೊರತು ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿಲ್ಲ. ರಾಜಕಾರಣ ಎಂದರೆ ಅಧಿಕಾರಕ್ಕೆ ಮಾಡುವ ವ್ಯವಹಾರ ಎನ್ನುವಂತಾಗಿದೆ ಎಂದು ಚನ್ನಪ್ಪ ಪೂಜಾರಿ ಆರೋಪಿಸಿದರು.

 


Spread the love

LEAVE A REPLY

Please enter your comment!
Please enter your name here