ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸಲಿರುವ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಈ ರೈಲು ಸೇವೆ ಆರಂಭಿಸುವಂತೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಮನವಿ ಮಾಡಿದ್ದರು. ಈ ಸಂಬಂಧ ಸಚಿವರು ಸಂಸದರಿಗೆ ಪತ್ರ ಬರೆದು ಅನುಮೋದನೆ ನೀಡಿರುವುದಾಗಿ ತಿಳಿಸಿದ್ದಾರೆ.
ಡಿಸೆಂಬರ್ 2ರಂದು ನೈಋತ್ಯ ರೈಲ್ವೆಯ ಸ್ಥಾಯಿ ಸಮಿತಿಯ ಅಧ್ಯಯನ ಭೇಟಿ ವೇಳೆ ಪಿ.ಸಿ. ಮೋಹನ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಎಸ್‌ಎಂವಿಟಿ ಬೆಂಗಳೂರು ನಿಲ್ದಾಣವನ್ನು ಆರಂಭ ಮತ್ತು ಅಂತಿಮ ನಿಲ್ದಾಣವನ್ನಾಗಿ ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಬೇಕೆಂದು ಅವರು ಒತ್ತಾಯಿಸಿದ್ದರು.
ಪ್ರಸ್ತುತ ಬೆಂಗಳೂರು-ಮುಂಬೈ ನಡುವಿನ ರೈಲು ಪ್ರಯಾಣಕ್ಕೆ ಸುಮಾರು 24ರಿಂದ 30 ಗಂಟೆಗಳ ಕಾಲ ಬೇಕಾಗುತ್ತದೆ. ಆದರೆ ಬಸ್ ಪ್ರಯಾಣಕ್ಕೆ 16ರಿಂದ 18 ಗಂಟೆಗಳು ಸಾಕಾಗುತ್ತವೆ. ಹೀಗಾಗಿ ಬಸ್ ವೇಗಕ್ಕೆ ಸಮಾನವಾದ ವೇಗದ ರೈಲು ಸೇವೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು.



