ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ `ಗೃಹಜ್ಯೋತಿ’ ಯೋಜನೆಯೂ ಒಂದು. ಇಷ್ಟು ದಿನ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದವರಿಗೆ ಈ ಬಾರಿಯ ಬಿಸಿಲ ಬೇಗೆ ಇನ್ನಷ್ಟು ಬೆವರಿಳಿಯುವಂತೆ ಮಾಡಿದೆ.
ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ಫಲಾನುಭವಿಗಳಾದವರು ಸರಾಸರಿ ವಿದ್ಯುತ್ ಬಳಕೆ ಮಾಡುತ್ತ, ಉಚಿತ ಯೋಜನೆಯ ಲಾಭವನ್ನೇನೋ ಪಡೆದರು. ಆದರೆ, ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದಾಗ, ಸಹಜವಾಗಿಯೇ ಫ್ಯಾನ್, ಕೂಲರ್‌ಗಳನ್ನು ತುಸು ಹೆಚ್ಚಾಗಿಯೇ ಬಳಸಿದ್ದಕ್ಕೆ ಈಗ ಬೆಲೆ ತೆರಬೇಕಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಹೆಚ್ಚಿರುವ ಕಾರಣ ಹಗಲು-ರಾತ್ರಿ ಎನ್ನದೆ ಫ್ಯಾನ್, ಕೂಲರ್ ಬಳಸುವ ಅನಿವಾರ್ಯತೆಯೂ ಇದೆ. ಹೇಗೂ ಗೃಹಜ್ಯೋತಿ ಇದೆಯಲ್ಲ ಎನ್ನುತ್ತ ಅನೇಕ ಗ್ರಾಹಕರು ತಮಗರಿವಿಲ್ಲದೆಯೇ ನಿಗದಿತ ಯೂನಿಟ್‌ಗಿಂತ ಹೆಚ್ಚೇ ಬಳಸಿದ್ದಾರೆ. ಪರಿಣಾಮವಾಗಿ ಅಂಥವರಿಗೆ ಹೆಸ್ಕಾಂ ಬಿಲ್ ಬರೆದು ಶಾಕ್ ನೀಡಿದೆ.
ನಾವು ವಾರ್ಷಿಕ ಸರಾಸರಿ ಯುನಿಟ್ ವಿದ್ಯುತ್ ಬಳಸುತ್ತಿದ್ದೆವು. ಗೃಹಜ್ಯೋತಿ ಯೋಜನೆಯಿಂದ ನಮಗೆ ಈ ಬಿಲ್‌ನಿಂದ ವಿನಾಯತಿ ಸಿಕ್ಕಿ, ವಿದ್ಯುತ್ ಫ್ರೀ ಆಗಿತ್ತು. ಇದರಿಂದ ನಮಗೆ ಲಾಭವೂ ಆಗಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚಿರುವ ಕಾರಣ ಮನೆಯಲ್ಲಿ ಫ್ಯಾನ್, ಕೂಲರ್‌ಗಳನ್ನು ತುಸು ಹೆಚ್ಚಾಗಿ ಬಳಕೆ ಮಾಡಿದೆವು. ಒಟ್ಟಾರೆ ಸರಾಸರಿ 185 ಯುನಿಟ್ ಬದಲಾಗಿ 205 ಯುನಿಟ್ ವಿದ್ಯುತ್ ಬಳಕೆಯಾಗಿರುವ ಕಾರಣ ಪೂರ್ಣ ಬಿಲ್ ಅಂದರೆ 2 ಸಾವಿರ ರೂ. ಪಾವತಿಸಬೇಕಾಗಿದೆ. ಇಷ್ಟು ದಿನ ಉಚಿತ ವಿದ್ಯುತ್ ಪಡೆಯುತ್ತಿದ್ದೆವು. ಈಗ ಏಕಾಏಕಿ 2 ಸಾವಿರ ರೂ. ಬಿಲ್ ಕೊಡಬೇಕಾಗಿ ಬಂದಿದೆ ಎಂದು ಗ್ರಾಹಕರೊಬ್ಬರು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ಉಚಿತವಾಗಿದೆ. ಅದಕ್ಕಿಂತ ಹೆಚ್ಚು ಬಳಕೆ ಮಾಡಿದರೆ ಸಂಪೂರ್ಣ ಬಿಲ್ ಮೊತ್ತ ಪಾವತಿಸಬೇಕು. ಆದರೆ ಸರಾಸರಿ ವಿದ್ಯುತ್ ಬಳಕೆಗಿಂತ ಹೆಚ್ಚಿನ ಯುನಿಟ್ ಬಳಕೆ ಮಾಡಿದರೆ ಆ ಬಳಕೆಯಾದ ಹೆಚ್ಚುವರಿ ಯುನಿಟ್‌ನ ಬಿಲ್ ಪಾವತಿಸಬೇಕು. ಮಾರ್ಚ್ ತಿಂಗಳಲ್ಲಿ ಅನೇಕ ಗ್ರಾಹಕರು ತಮಗರಿವಿಲ್ಲದೆಯೇ ನಿಗದಿತ ಸರಾಸರಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಾರೆ. ಹೀಗಾಗಿ ಅನೇಕರಿಗೆ ಈ ಬಾರಿ ಬಿಲ್ ಬಂದಿದೆ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿಗಳು.
ಗೃಹಜ್ಯೋತಿ ನಿಯಮಗಳ ಪ್ರಕಾರ, ಗ್ರಾಹಕರು ಸರಾಸರಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದರೆ, ಆ ಹೆಚ್ಚುವರಿ ಯುನಿಟ್ ಬಳಕೆಯ ಬಿಲ್ ಪಾವತಿಸಬೇಕು. ಮಾರ್ಚ್ ತಿಂಗಳ ಬಿಲ್ ವಿತರಣೆಯಾಗಿದ್ದು, ಗ್ರಾಹಕರು ಬಿಲ್ ಪರಿಶೀಲನೆ ಮಾಡಿ, ಹೆಚ್ಚುವರಿ ಬಳಕೆಯ ಶುಲ್ಕ ವಿಧಿಸಿದ್ದರೆ ತಪ್ಪದೇ ಪಾವತಿಸಬೇಕು. ಈ ಬಗ್ಗೆ ಪ್ರತಿಯೊಬ್ಬ ಗ್ರಾಹಕರೂ ತಮ್ಮ ಬಿಲ್ ಪರಿಶೀಲಿಸಿಕೊಳ್ಳಬೇಕಿದೆ.
– ನಾಗರಾಜ ಕುರಿಯವರ.
ಹೆಸ್ಕಾಂ ಎಇಇ, ಗದಗ.