ಬೆಳಗಾವಿ: ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವು ನಾನಾ ಮಹಿಳೆಯರಿಗೆ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತಿದೆ.
ಇತ್ತೀಚೆಗಷ್ಟೇ ಗೃಹಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿಸಿದ್ದರು. ಅದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮತ್ತೊಬ್ಬ ಮಹಿಳೆ ಫ್ಯಾನ್ಸಿ ಸ್ಟೋರ್ ಆರಂಭಿಸಿದ್ದರು. ಇತ್ತೀಚೆಗೆ ಅಜ್ಜಿಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು.
ಅಲ್ಲದೇ ಇದೇ ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಿಂದ ಬೆಳಗಾವಿಯ ಮಹಿಳೆಯೊಬ್ಬರು ತಮ್ಮ ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದರು.
ಇದೀಗ ಇದೇ ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮದ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಅವರು, ಗ್ರಾಮ ಪಂಚಾಯತ ಸದಸ್ಯರಾಗಿದ್ದು ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ತಮ್ಮ ಹದಿಮೂರು ಕಂತಿನ ಗೃಹಲಕ್ಷ್ಮೀ ಹಣ ಹಾಗೂ ಪಂಚಾಯ್ತಿ ಸದಸ್ಯತ್ವದ ಗೌರವಧನವನ್ನು ಸೇರಿಸಿ ಮಕ್ಕಳ ಸಹಕಾರದಿಂದ ಒಂದು ಲಕ್ಷ ಐವತ್ತು ಸಾವಿರ ರೂ ಖರ್ಚು ಮಾಡಿ ಸಣ್ಣ ಪ್ರಮಾಣದ ಗ್ರಂಥಾಲಯವನ್ನು ನಿರ್ಮಿಸಿ ಮಾದರಿಯಾಗಿದ್ದಾರೆ.