ಬಾಗಲಕೋಟೆ: ದಾಂಪತ್ಯ ಜೀವನದ ಬಗ್ಗೆ ಬೆಟ್ಟದಷ್ಟು ಆಸೆ, ಕನಸು ಕಟ್ಟುಕೊಂಡಿದ್ದ ವರನ ಬಾಳಲ್ಲಿ ವಿಧಿ ಬೇರೆಯದ್ದೇ ಆಟ ಆಡಿತ್ತು. ಹೊಸ ಬದುಕು ಪ್ರಾರಂಭಿಸಬೇಕಾಗಿದ್ದ ವರನ ಬದುಕೇ ಮುಗಿದು ಹೋಗಿತ್ತು. ಹೌದು, ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ನಡೆದಿದೆ.
ಕುಂಬಾರಹಳ್ಳ ಗ್ರಾಮದ ನಿವಾಸಿ ಪ್ರವೀಣ ಕುರ್ನೆ ಎಂಬಾತನೇ ಮೃತ ದುರ್ದೈವಿ. ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ. ಮೂಲತಃ ಕುಂಬಾರಹಳ್ಳಿ ಗ್ರಾಮದ ಕುರಣಿ ಕುಟುಂಬದವರಾಗಿದ್ದಾರೆ. ಇಂದು ಜಮಖಂಡಿ ನಗರದಲ್ಲಿರುವ ಮನೆಯಲ್ಲಿ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು. ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು.
ಕಲ್ಯಾಣಮಂಟಪಕ್ಕೆ ಆಗಮಿಸಿದ ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸುವ ಗಳಿಗೆಯಲ್ಲೆ ಯಾರೂ ಊಹಿಸದ ದುರ್ಘಟನೆ ನಡೆದಿದೆ. ಹಠಾತ್ ಹೃದಯಾಘಾತಕ್ಕೆ ವರ ಪ್ರವೀಣ್ ಸಾವನ್ನಪ್ಪಿದ್ದಾನೆ. ಗಂಡನ ಸಾವು ನೋಡಿ ಅಘಾತಕ್ಕೊಳಗಾದ ಯುವತಿ ಮಂಟಪದಲ್ಲೇ ಕಣ್ಣೀರು ಹಾಕಿದ್ದಾಳೆ. ಇತ್ತ ಮದುವೆ ಸಂಭ್ರಮದಲ್ಲೇ ಮಗನನ್ನು ಕಳೆದುಕೊಂಡ ಪೋಷಕರು ದುಃಖ ಮುಗಿಲು ಮುಟ್ಟಿದೆ.



