
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶದ ಜನತೆಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನಾಗರಿಕೋ ದೇವೋಭವ ಎಂಬ ಘೋಷಣೆಯೊಂದಿಗೆ ಜಿಎಸ್‌ಟಿ ದರ ಕಡಿತ ಮಾಡಿರುವುದು ಒಂದು ಕ್ರಾಂತಿಕಾರಕ ಹೆಜ್ಜೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಎಸ್‌ಟಿ ದರ ಕಡಿತ ಮಾಡಿದ್ದರಿಂದ ಜನಸಾಮಾನ್ಯರು, ಬಡವರು, ಮಹಿಳೆಯರು ಹಾಗೂ ರೈತರ ನಿತ್ಯ ಬದುಕಿನ ಹೊರೆ ಇಳಿಸಿದಂತಾಗಿದೆ. 375 ವಸ್ತುಗಳ ತೆರಿಗೆ ಕಡಿಮೆ ಮಾಡಲಾಗಿದೆ. ಈ ಮೊದಲಿದ್ದ ನಾಲ್ಕು ಸ್ಲ್ಯಾಬ್‌ಗಳ ಬದಲಾಗಿ ಎರಡು ಸ್ಲ್ಯಾಬ್‌ಗಳಿಗೆ ಜಿಎಸ್‌ಟಿ ನಿಗದಿಪಡಿಸಿದ್ದು ಸ್ವಾಗತಾರ್ಹ. ಇದರಿಂದಾಗಿ ದಿನೋಪಯೋಗಿ ವಸ್ತುಗಳ ಬೆಲೆ ಕಡಿಮೆ ಆಗಲಿದ್ದು, ಜನರ ಮೇಲಿನ ಹೊರೆ ಕಡಿತಗೊಳ್ಳಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಬಳಸಲ್ಪಡುವ ವಸ್ತುಗಳ ಮೇಲಿನ ತೆರಿಗೆಯನ್ನು ಸಂಪೂರ್ಣ ತೆಗೆದು ಹಾಕಲಾಗಿದೆ. ಜಿಎಸ್‌ಟಿ ದರ ಕಡಿಮೆ ಮಾಡಿರುವುದರಿಂದ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ ಶಾಸಕರು, ಜಿಎಸ್‌ಟಿ ಕಡಿಮೆ ಮಾಡಿರುವದಕ್ಕೆ ಆರೋಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಆಡಳಿತ ನಡೆಸಲು ಹೆಣಗಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ವಿಜಯ ಮೆಕ್ಕಿ, ಪೂರ್ಣಾಜಿ ಖರಾಟೆ, ಎಂ.ಆರ್. ಪಾಟೀಲ, ನೀಲಪ್ಪ ಹತ್ತಿ, ಅನಿಲ ಮುಳುಗುಂದ, ಅಶ್ವಿನಿ ಅಂಕಲಕೋಟಿ, ಗಂಗಾಧರ ಮೆಣಸಿನಕಾಯಿ, ಮಂಜುಳಾ ಗುಂಜಳ, ಮಹಾದೇವಪ್ಪ ಅಣ್ಣಿಗೇರಿ, ಸೋಮೇಶ್ ಉಪನಾಳ, ದುಂಡೇಶ ಕೊಟಗಿ, ಭೀಮಣ್ಣ ಯಂಗಾಡಿ, ಪ್ರವೀಣ ಬೋಮಲೆ ಇದ್ದರು.
ಬಿಜೆಪಿ ಶಿರಹಟ್ಟಿ ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ಜಿಎಸ್‌ಟಿ ಕಡಿತದಿಂದ ರಾಜ್ಯ ಸರ್ಕಾರಕ್ಕೆ ಎರಡು ಲಕ್ಷ ಕೋಟಿ ರೂಪಾಯಿಗಳ ಆದಾಯ ಕೊರತೆ ಆಗಲಿದೆ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಅಂದರೆ ಜಿಎಸ್‌ಟಿ ಕಡಿತ ಮಾಡಬಾರದಿತ್ತು ಎಂಬುದು ಅವರ ಅಭಿಪ್ರಾಯ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕ ತೆರಿಗೆ ಸಂಗ್ರಹಿಸುವ ಮೂಲಕ ಜನರನ್ನು ಲೂಟಿ ಮಾಡುತ್ತಿದೆ. ಅಗತ್ಯ ವಸ್ತುಗಳ ದರ ಹೆಚ್ಚಿಸುವುದೇ ಕಾಂಗ್ರೆಸ್‌ನ ಸಾಧನೆಯಾಗಿದೆ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ತೆರಿಗೆ ಹೆಚ್ಚಳ ಮಾಡಿರುವುದು ಕಾಂಗ್ರೆಸ್‌ನ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂದು ಆರೋಪಿಸಿದರು.

