ಗ್ಯಾರಂಟಿಯಿಂದ ಬಡವರ ಜೀವನ ಸುಧಾರಣೆ: ಯತೀಂದ್ರ ಸಿದ್ದರಾಮಯ್ಯ 

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆಯ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದರ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಬಡ ಜನತೆಯ ಜೀವನ ಮಟ್ಟ ಸುಧಾರಣೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Advertisement

ಅವರು ಶನಿವಾರ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಬಸವರಾಜ ಮ.ಕೊಂಚಿಗೇರಿ ಸರಕಾರಿ ಪ.ಪೂ ಮಹಾವಿದ್ಯಾಲಯದ ಕಟ್ಟಡ, ಗ್ರಂಥಾಲಯ ಉದ್ಘಾಟನೆ, ಎಚ್‌ಡಿಎಫ್‌ಸಿ ಬ್ಯಾಂಕ್ ಲೋಕಾರ್ಪಣೆ, ಸಂತೆಕಟ್ಟೆ ಉದ್ಘಾಟನೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ, ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ಶ್ರೀ ಬೀರೇಶ್ವರ ಸಮುದಾಯ ಭವನದ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 2 ಬಾರಿ ಸಿಎಂ ಆಗಿ ಶೋಷಿತರ, ಬಡವರ, ಅಲ್ಪಸಂಖ್ಯಾತರ, ಮಹಿಳೆಯರ ಮತ್ತು ರೈತರ ಪರವಾಗಿ ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಿಮ್ಮ ಬೆಂಬಲ ಸದಾ ಹೀಗೇ ಇರಬೇಕು. ಸಮುದಾಯ ಭವನಕ್ಕೆ 51 ಲಕ್ಷ ರೂ.ಗಳನ್ನು ಸಿಎಂ ಅವರ ವಿವೇಚನ ನಿಧಿಯಲ್ಲಿ ಕೊಡಿಸಲಾಗುವುದು. ಕುಸಲಾಪೂರ ಗ್ರಾಮದಲ್ಲಿಯ ಸಮುದಾಯ ಭವನಕ್ಕೂ 25 ಲಕ್ಷ ರೂಗಳನ್ನು ನನ್ನ ಶಾಸಕರ ನಿಧಿಯಿಂದ ಕೊಡುತ್ತೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದ್ದು ಶ್ಲಾಘನೀಯ. ಇದರಿಂದ ಗ್ರಾಮದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಸಂಘಟನೆ ಜೊತೆಗೆ ಶೋಷಿತರ ಧ್ವನಿಯಾಗಿದ್ದರು. ಇವರಂತೆ ಯತೀಂದ್ರ ಸಿದ್ದರಾಮಯ್ಯ ಅವರು ಕೂಡಾ ಇದೇ ಮಾರ್ಗದಲ್ಲಿ ನಡೆಯಬೇಕು, ಮುಂದಿನ ದಿನಗಳಲ್ಲಿ ದೊಡ್ಡ ನಾಯಕನಾಗಿ ಹೊರಹೊಮ್ಮಬೇಕೆಂದು ಹೇಳಿದರು.

ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ ಮಾತನಾಡಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಗ್ರಾ.ಪಂ ಅಧ್ಯಕ್ಷೆ ಹೇಮಾ ಶರಣಪ್ಪ ಹರ್ಲಾಪೂರ, ವಿಶ್ವನಾಥ ಕಪ್ಪತ್ತನವರ, ತಿಪ್ಪಣ್ಣ ಕೊಂಚಿಗೇರಿ, ರುದ್ರಣ್ಣ ಗುಳಗುಳಿ, ಫಕ್ಕೀರಪ್ಪ ಹೆಬಸೂರ, ಶಿಲ್ಪಾ ಕುದಗೊಂಡ, ಕವಿತಾ ವಾರಂಗಲ್, ರಾಮಕೃಷ್ಣ ರೊಳ್ಳಿ, ಪ್ರಕಾಶ ಕರಿ, ಭಾಗ್ಯಶ್ರೀ ಬಾಬಣ್ಣ, ಡಿ.ಕೆ. ಹೊನ್ನಪ್ಪನವರ, ಗಿರಿಜಮ್ಮ ಲಮಾಣಿ, ರಾಮಣ್ಣ ಹರ್ಲಾಪೂರ, ಬಸಮ್ಮ ಮಾದರ, ಮಾರ್ತಂಡಪ್ಪ ಹಾದಿಮನಿ, ರುದ್ರಗೌಡ ಪಾಟೀಲ, ನಿರ್ಮಲಾ ಅಡವಿ, ಸಿದ್ದಪ್ಪ ಮುಧೋಳ, ಶಿವಪ್ಪ ಕದಂ, ಕೃಷ್ಣಾ ಲಮಾಣಿ, ಜಯವ್ವ ಉಪ್ಪಾರ, ಕಾವೇರಿ ಕಟಗಿ, ನೀಲವ್ವ ನೆರಳ್ತಿ ಮಂಜುನಾಥ ಹಾವೇರಿ, ಸುಜಾತಾ ಕಪ್ಪಲಿ, ಈರಯ್ಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

“ಇತ್ತೀಚೆಗೆ ಬೆಂಗಳೂರು ಹಾಗೂ ತುಮಕೂರು ವಿಶ್ವವಿದ್ಯಾಲಯದ ತಜ್ಞರು 6300 ಕುಟುಂಬಗಳನ್ನು ಅಧ್ಯಯನ ಮಾಡಿದ್ದು, ಅದರಲ್ಲಿ ಶೇ. 84ರಷ್ಟು ಜನತೆ ಗ್ಯಾರಂಟಿ ಯೋಜನೆಗಳಿಂದ ನಮ್ಮ ಜೀವನ ಮಟ್ಟ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ. ಗ್ಯಾರಂಟಿ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಇದು ತಕ್ಕ ಉತ್ತರವಾಗಿದ್ದು, ವರ್ಷಕ್ಕೆ 52 ಸಾವಿರ ಕೋಟಿಯನ್ನು ಕಾಂಗ್ರೆಸ್ ಸರಕಾರ ಬಡವರಿಗೆ ನೀಡುತ್ತಿದೆ”
– ಯತೀಂದ್ರ ಸಿದ್ದರಾಮಯ್ಯ.
ವಿ.ಪ ಸದಸ್ಯರು.


Spread the love

LEAVE A REPLY

Please enter your comment!
Please enter your name here