ಬೀದರ್: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ಬೀದರ್ ಜಿಲ್ಲೆಯ ಈರುಳ್ಳಿ ಬೀಜ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯುದ್ಧದ ಹಿನ್ನೆಲೆ ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ, ಈರುಳ್ಳಿ ಬೀಜದ ಬೆಲೆ ಗಣನೀಯವಾಗಿ ಕುಸಿತಗೊಂಡಿದೆ. ಕಳೆದ ವರ್ಷ ಒಂದು ಕ್ವಿಂಟಾಲ್ ಈರುಳ್ಳಿ ಬೀಜಕ್ಕೆ ಸುಮಾರು 1.20 ಲಕ್ಷ ರೂಪಾಯಿ ಸಿಗುತ್ತಿದ್ದರೆ, ಈ ವರ್ಷ ದರ ಅರ್ಧದಷ್ಟು ಇಳಿದು ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಬೀದರ್ ಜಿಲ್ಲೆಯಲ್ಲಿ ಗುಣಮಟ್ಟದ ಈರುಳ್ಳಿ ಬೀಜ ಉತ್ಪಾದನೆಯಾಗುವುದರಿಂದ ಹೈದರಾಬಾದ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಅಲ್ಲಿಂದ ದಲ್ಲಾಳಿಗಳು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು.
ಆದರೆ ಮಧ್ಯ ಪ್ರಾಚ್ಯದ ಯುದ್ಧದಿಂದ ರಫ್ತು ಕಡಿಮೆಯಾಗಿದ್ದು, ದಲ್ಲಾಳಿಗಳು ಕಡಿಮೆ ದರಕ್ಕೆ ಖರೀದಿ ಮಾಡುತ್ತಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಜಿಲ್ಲೆಯಲ್ಲೇ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬೆಳೆದಿದ್ದು, ಕಡಿಮೆ ನೀರಿನಲ್ಲಿ ಬೆಳೆದು ಉತ್ತಮ ಆದಾಯ ನೀಡುವ ಕಾರಣದಿಂದ ರೈತರು ಹೆಚ್ಚಿನ ಆಸಕ್ತಿ ತೋರಿದ್ದರು. ಒಂದು ಎಕರೆ ಬೆಳೆ ಬೆಳೆಯಲು 70 ರಿಂದ 80 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಪ್ರಸ್ತುತ ದರ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದು, “ಬೆಲೆ ಇಳಿಕೆಯಿಂದ ನಾವು ಹೈರಾಣಾಗಿದ್ದೇವೆ” ಎಂದು ರೈತ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ.
ಯುದ್ಧದ ಪರಿಣಾಮ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೇಲೂ ಬಿದ್ದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.



