ಕಲಬುರಗಿ: ಕಲಬುರಗಿಯಲ್ಲಿ ಮತ್ತೆ ಗುಂಡಿನ ಸದ್ದು ಭಯದ ವಾತಾವರಣ ಮೂಡಿಸಿದೆ. ರೌಡಿಶೀಟರ್ ಶಂಕರ್ ಅಳ್ಳೊಳ್ಳಿ ಎಂಬಾಂತನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಶಹಬಾದ್ ತಾಲ್ಲೂಕಿನ ಭಂಕೂರ ಕ್ರಾಸ್ ಬಳಿಯಿರುವ ಐನಾಪುರ ಡಾಬಾದಲ್ಲಿ ನಡೆದಿದೆ. ಶಂಕರ್ ಅಳ್ಳೊಳ್ಳಿ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಡಾಬಾಗೆ ಬಂದಿದ್ದಾಗ ಶುಭಂ ಹಾಗೂ ಆತನ ಸಂಗಡಿಗರು ಗುಂಡಿನ ದಾಳಿ ನಡೆಸಿದ್ದಾರೆ.
ಗಿರೀಶ್ ಕಂಬಾನೂರ್ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ನಡೆದ ಗುಂಡಿನ ದಾಳಿ ಎನ್ನಲಾಗುತ್ತಿದ್ದು, ಗುಂಡಿನ ದಾಳಿ ನಡೆದ ಕೂಡಲೇ ಶಂಕರ್ ಡಾಬಾದಿಂದ ಹೊರಬಂದು, ಸ್ವಲ್ಪ ಮುಂದೆ ನಿಂತಿದ್ದ ಪೊಲೀಸ್ ಜೀಪ್‌ನಲ್ಲಿ ಕೂತು ರಕ್ಷಣೆ ಪಡೆಯಲು ಮುಂದಾಗಿದ್ದಾನೆ. ಅದೇ ಸಮಯದಲ್ಲಿ 112 ನಲ್ಲಿದ್ದ ಪೊಲೀಸರು ಗಲಾಟೆ ವಿಚಾರ ತಿಳಿದು, ಡಾಬಾಗೆ ಎಂಟ್ರಿ ಕೊಟ್ಟಿದ್ದಾರೆ.
ಪೊಲೀಸರು ಡಾಬಾದೊಳಗೆ ಪ್ರವೇಶಿಸುತ್ತಿದ್ದಂತೆ ಶಂಕರ್ ಪೊಲೀಸ್ ಜೀಪ್ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಆದರೆ, ದಾರಿ ಮಧ್ಯೆ ಮಚ್ಚಿನಿಂದ ಬಂದವರು ಪೊಲೀಸ್ ವಾಹನದ ಮೇಲೂ ದಾಳಿ ನಡೆಸಿದ್ದಾರೆ. ಇದಾದ ಬಳಿಕ ಶಂಕರ್ ಅಳ್ಳೊಳ್ಳಿ ತಕ್ಷಣ ಪೊಲೀಸ್ ವಾಹನದಲ್ಲೇ ಎಸ್ಕೇಪ್ ಆಗಿದ್ದು, ಗಾಯಗೊಂಡ ಅವನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.