ವಿಜಯಸಾಕ್ಷಿ ಸುದ್ದಿ, ಗದಗ: ಜೀವನ ಎಂದರೆ ಬರೀ ಬದುಕುವದು ಅಲ್ಲ, ಬದುಕಿನಲ್ಲಿ ಹೇಗೆ ಸಾಮಾಜಿಕ ಸೇವೆ ಮಾಡಬೇಕು ಎಂದು ತೋರಿಸಿಕೊಟ್ಟವರು ರವಿ ಗುಂಜೀಕರರು ಎಂದು ಓಂಕಾರೇಶ್ವರ ಮಠದ ಪೂಜ್ಯಶ್ರೀ ಫಕ್ಕೀರೇಶ್ವರ ಶಿವಾಚಾರ್ಯರು ಹೇಳಿದರು.
ಅವರು ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಜರುಗಿದ ರವಿ ಎಲ್.ಗುಂಜೀಕರ್ ಅಭಿಮಾನಿ ಬಳಗದ ಉದ್ಘಾಟನೆ ಹಾಗೂ ಅವರ 60ನೇ ವರ್ಷದ ಹುಟ್ಟುಹಬ್ಬ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರವಿ ಗುಂಜೀಕರರ ಆಡಳಿತದ ಜವಾಬ್ದಾರಿ, ಸಾಮಾಜಿಕ ಸೇವೆ ಮೆಚ್ಚುವಂತಿದೆ. ನಿವೃತ್ತಿಯ ನಂತರವೂ ಪ್ರವೃತ್ತಿಯಲ್ಲಿ ಅವರ ಸೇವೆ ಮುಂದುವರೆಯಬೇಕೆಂದು ಅವರ ಅಭಿಮಾನಿ ಬಳಗವು ಸಂಘವನ್ನು ಸ್ಥಾಪಿಸಿರುವುದು ಶ್ಲಾಘನೀಯ. ಇದಕ್ಕೆಲ್ಲ ಪ್ರೇರಣೆ ಅವರ ತಂದೆ-ತಾಯಿಯ ಆಶೀರ್ವಾದ. ರವಿ ಗುಂಜೀಕರರ ಅಭಿಮಾನಿ ಬಳಗದಿಂದ ಸಮಾಜಕ್ಕೆ ಉತ್ತಮ ಕೊಡುಗೆಗಳು ನಿರಂತರವಾಗಿ ಸಿಗಲಿ ಎಂದು ಹಾರೈಸಿದರು.
ಜಿ.ಪಂ ಉಪ ಕಾರ್ಯದರ್ಶಿ ಚಂದ್ರಶೇಖರ ಮುಂಡರಗಿ ಮಾತನಾಡಿ, ಅಭಿಮಾನಿ ಬಳಗವು ಕೇವಲ ಸಿನಿಮಾ ನಟರಿಗೆ ಮೀಸಲಾಗಿತ್ತು. ಆದರೆ, ರವಿ ಗುಂಜೀಕರರ ಅಭಿಮಾನಿ ಬಳಗವು ಸದೃಢ ಸಮಾಜ ನಿರ್ಮಾಣ ಮಾಡಲು ಹಲವಾರು ಧ್ಯೇಯೋದ್ದೇಶಗಳೊಂದಿಗೆ ಸ್ಥಾಪನೆಗೊಂಡಿರುವುದು ಶ್ಲಾಘನೀಯ ಎಂದರು.
ಡಾ. ಎಸ್.ಆರ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ರವಿ ಗುಂಜೀಕರರ ಅಭಿಮಾನಿ ಬಳಗ ಬಹುದೊಡ್ಡ ದೂರದೃಷ್ಟಿ ಹೊಂದಿದೆ. ವೃತ್ತಿಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ರವಿ ಗುಂಜೀಕರರು ನಿವೃತ್ತಿಯ ನಂತರ ಸಾಮಾಜಿಕ ಸೇವೆ ಮಾಡಬೇಕು ಎಂಬ ಅಭಿಲಾಷೆಗಳೊಂದಿಗೆ ಈ ಅಭಿಮಾನಿ ಬಳಗವನ್ನು ಸ್ಥಾಪಿಸಲಾಗಿದ್ದು, ಈ ಸಂಘದಿಂದ ಆರೋಗ್ಯ ಸೇವೆ, ಶಿಕ್ಷಣಕ್ಕೆ ಆದ್ಯತೆ, ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ, ಸಮುದಾಯ ಭವನ, ಸಾಹಿತ್ಯ, ಸಂಸ್ಕೃತಿ, ಕಲೆ ಉಳಿಸುವುದು, ಗ್ರಾಮೀಣ ಜನರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸುವುದು ಇತ್ಯಾದಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ಹೊಂದಿದೆ ಎಂದರು.
ನೀಲಗುಂದದ ಮಂಜುನಾಥ ಸ್ವಾಮಿಗಳು ಸಮ್ಮುಖವಹಿಸಿದ್ದರು. ಅರುಣಕುಮಾರ ಚವ್ಹಾಣ, ವಿಜಯಕುಮಾರ ಗಡ್ಡಿ, ಆರ್.ಎಂ. ನಿಂಬನಾಯ್ಕರ, ಮಲ್ಲಿಕಾರ್ಜುನ ಹಿರೇಮಠ, ಹುಚ್ಚಪ್ಪ ಸಂದಕದ, ಬಸವರಾಜ ಬಳ್ಳಾರಿ, ಭಾಷಾಸಾಬ್ ಮಲ್ಲಸಮುದ್ರ, ವಿಜಯ್ ಗುಂಜೀಕರ, ಈರಮ್ಮ ತಾಳಿಕೋಟಿ ಮುಂತಾದವರು ಉಪಸ್ಥಿತರಿದ್ದರು.
ಗಣ್ಯ ಉದ್ಯಮಿ ರಾಜು ಗುಡಿಮನಿ ಮಾತನಾಡಿ, ಡಾ. ರವಿ ಗುಂಜೀಕರರು ಈಗಾಗಲೇ ಸರಕಾರಿ ಸೇವೆಯಲ್ಲಿ ಇದ್ದು, ದಕ್ಷ ಆಡಳಿತದ ಮೂಲಕ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಮಾಜ ಸೇವೆಯ ಮೂಲಕ ಅವರು ಇನ್ನಷ್ಟು ಕೊಡುಗೆ ನೀಡಬೇಕು. ನಿವೃತ್ತಿ ನಂತರ ಸಾಕಷ್ಟು ಜನರು ಪಿಂಚಣಿ, ಮಕ್ಕಳ ಭವಿಷ್ಯದ ಬಗ್ಗೆ, ಕುಟುಂಬದವರಿಯೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಆದರೆ, ರವಿ ಗುಂಜೀಕರರು ನಿವೃತ್ತಿ ನಂತರ ಸಮಾಜಕ್ಕೆ ಮತ್ತಷ್ಟು ಕೊಡುಗೆ ಕೊಡಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರ ಲವಲವಿಕೆ, ಉತ್ಸಾಹ ಈ ಸಮಾಜಕ್ಕೆ ಪ್ರೇರಣೆಯಾಗಲಿದೆ ಎಂದು ಹೇಳಿದರು.