ಬದುಕಿನ ಉನ್ನತಿಗೆ ಶ್ರೀ ಗುರು ಮುಖ್ಯ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಚನ್ನಗಿರಿ: ಸಂಪತ್ತಿನ ಬದುಕಿನಲ್ಲಿ ಬಾಳುವ ಮನುಷ್ಯನಿಗೆ ಗುಣವಂತರ ಗುಣಾದರ್ಶಗಳು ಕಾಣಲಾರವು. ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗೆ ಶ್ರೀ ಗುರು ಮುಖ್ಯ. ಪರಿವರ್ತನಾಶೀಲ ಸಮಾಜ ನಿರ್ಮಾಣಕ್ಕೆ ಗುರು ಬೋಧಾಮೃತ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಗುರುವಾರ ತಾಲೂಕಿನ ತಾವರೆಕೆರೆ ಶಿಲಾಮಠದ ಸಿದ್ಧಿಪುರುಷ ಲಿಂ. ಶ್ರೀ ಸಿದ್ಧಲಿಂಗ ಶಿವಾಚಾರ್ಯರ 54ನೇ ವರ್ಷದ ಮತ್ತು ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯರ 72ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜೀವನದಲ್ಲಿ ಏನೇ ಸವಾಲುಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಆತ್ಮಬಲ ಇರಬೇಕು. ಸುಂದರವಾದ ಮನೆ ಕಟ್ಟಿದ ಮನುಷ್ಯ ಆ ಮನೆಯಲ್ಲಿ ಹೇಗೆ ಬಾಳಬೇಕೆಂಬುದನ್ನು ಮರೆಯುತ್ತಾನೆ. ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಮನುಷ್ಯನ ಮನಸ್ಸೇ ಕಾರಣ. ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ. ದೃಢ ಸಂಕಲ್ಪ ಶಕ್ತಿ ಇಲ್ಲದೇ ಮಾಡುವ ಕೆಲಸಗಳು ಕೈಗೂಡುವುದಿಲ್ಲ. ಜೀವನದಲ್ಲಿ ನಂಬಿಕೆ ಮತ್ತು ವಿಶ್ವಾಸ ಮುಖ್ಯ. ಭವ ಬಂಧನದಿಂದ ಮುಕ್ತಗೊಳ್ಳಲು ಗುರು ತೋರಿದ ದಾರಿಯಲ್ಲಿ ಸಾಗಬೇಕಾಗುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿದ ಶಾಸಕ ಬಸವರಾಜ ಶಿವಗಂಗಾ ಮಾತನಾಡಿ, ಮನುಷ್ಯನ ಮನದಂಗಳದಲ್ಲಿ ಸತ್ಯ-ಶಾಂತಿಗಳಂಥ ದೈವೀ ಗುಣಗಳನ್ನು ಸಂಪಾದಿಸಿಕೊಂಡು ಬಾಳಬೇಕು. ನೀತಿ, ಧರ್ಮ, ಗುರು ಮತ್ತು ದೇಶದ ಬಗೆಗೆ ಉದಾತ್ತ ಭಾವನೆಗಳಿರಬೇಕು. ಲಿಂಗೈಕ್ಯ ಉಭಯ ಶಿವಾಚಾರ್ಯರು ಧರ್ಮಮುಖಿಯಾಗಿ ಆಧ್ಯಾತ್ಮ ಜ್ಞಾನ ಸಂಪತ್ತನ್ನು ಭಕ್ತ ಸಮುದಾಯಕ್ಕೆ ಬೋಧಿಸಿದ್ದಾರೆ ಎಂದರು.

ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಬಳ್ಳಾರಿ ಕಲ್ಯಾಣ ಸ್ವಾಮಿಗಳು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ಕರ್ಪೂರವಳ್ಳಿ ಅಭಿನವ ಚಂದ್ರಶೇಖರ ಶಿವಾಚಾರ್ಯರು, ವೃತ್ತ ನಿರೀಕ್ಷಕರಾದ ರವೀಶ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಬಿ.ಕೆ ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿಕುಮಾರ ಶಾಸ್ತಿç ಸ್ವಾಗತಿಸಿದರು. ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು ನಿರೂಪಿಸಿದರು.

ನೇತೃತ್ವ ವಹಿಸಿದ ತಾವರೆಕೆರೆ-ಎಡೆಯೂರು ಮಠಾಧ್ಯಕ್ಷರಾದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಎಲ್ಲರೂ ಎಲ್ಲಾ ಸಂದರ್ಭಗಳಲ್ಲಿ ಎಲ್ಲರ ಮೆಚ್ಚುಗೆ ಗಳಿಸಲು ಸಾಧ್ಯವಾಗುವುದಿಲ್ಲ. ಮನುಷ್ಯ ತನ್ನ ಅಂತರಂಗ ಒಪ್ಪುವ ಹಾಗೆ ಒಳ್ಳೆಯ ಕೆಲಸ ಮಾಡಬೇಕು. ಮರೆವು ಬಂದಾಗ ಅರಿವು ದೂರವಾಗುತ್ತದೆ. ಅಜ್ಞಾನ ಸರಿಸಿ ಜ್ಞಾನ ಕೊಡುವ ಶಕ್ತಿ ಶ್ರೀ ಗುರುವಿಗೆ ಇದೆ. ಲಿಂ. ಸಿದ್ಧಲಿಂಗ ಶಿವಾಚಾರ್ಯರು ಮತ್ತು ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯರು ತಮ್ಮ ಸಾಧನೆ-ಬೋಧನೆಗಳ ಮೂಲಕ ವೀರಶೈವ ಧರ್ಮ ಸಂಸ್ಕೃತಿಯನ್ನು ಬೆಳೆಸಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here