ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿದ್ಯಾರ್ಥಿ ಜೀವನದಲ್ಲಿ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ನೀಡಿದವರು ಗುರು. ಅವರನ್ನು ಎಂದೂ ಮರೆಯದಿರಿ ಎಂದು ಮುರುಘಾಮಠ ಧಾರವಾಡ ಹಾಗೂ ಗವಿಮಠ ಮುಳಗುಂದದ ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಶಿಕ್ಷಣ ಸಮಿತಿಯ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2001-02ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಗುರುಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಂದು ಕಾರ್ಯಕ್ಕೂ ಗುರು ಬೇಕು. ಅದರಂತೆ ವಿದ್ಯಾರ್ಥಿ ಜೀವನಕ್ಕೆ ಗುರು ತುಂಬಾ ಅವಶ್ಯವಾಗಿದ್ದು, ಗುರುವಿನ ಮಾರ್ಗದಲ್ಲಿ ನಡೆದರೆ ಸನ್ಮಾರ್ಗ ಪ್ರಾಪ್ತಿಯಾಗುವುದರ ಜೊತೆಯಲ್ಲಿ ಸಮಾಜದಲ್ಲಿ ಸನ್ಮಾರ್ಗದ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು, ಹೆತ್ತ ತಂದೆ-ತಾಯಿಗಳನ್ನು ಎಂದೆಂದಿಗೂ ಮರೆಯಬಾರದು ಎಂದರು.
ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಬದುಕಿನುದ್ದಕ್ಕೂ ಗುರು ಅವಶ್ಯಕವಾಗಿದ್ದು, ಗುರಿಯನ್ನು ತಲುಪಲು ಗುರುವಿನ ಕೃಪೆ ಪಡೆದುಕೊಂಡಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದರು.
ಕಲಿಸಿದ ಗುರುಗಳನ್ನು ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದವರೆಗೂ ವಿಶೇಷವಾಗಿ ಹೂವಿನ ಸುರಿಮಳೆಯೊಂದಿಗೆ ಗೌರವದಿಂದ ಬರಮಾಡಿಕೊಂಡರು. ಕಲಿಸಿದ ಗುರುಗಳನ್ನು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರನ್ನು ಸನ್ಮಾನಿಸಲಾಯಿತು. ಅಗಲಿದ ಗುರುಗಳಿಗೆ, ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು.
ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ನಾಮ ಫಲಕವನ್ನು ಹಾಗೂ ಅಡುಗೆ ಕೋಣೆಗೆ ಫಲಕಗಳನ್ನು ಕೊಡುಗೆಯಾಗಿ ನೀಡಿದರು. ಸಂಸ್ಥೆ ನಡೆದುಬಂದ ದಾರಿ, ಗವಿಮಠದ ಬಾಲಲೀಲಾ ಮಹಾಂತ ಶಿವಯೋಗಿಗಳ ಹಾಗೂ ಮಲ್ಲಿಕಾರ್ಜುನ ಮಾಹಾಸ್ವಾಮಿಗಳ ಸಂಪೂರ್ಣ ವಿಡಿಯೋ ಮಾಹಿತಿ ಹಾಗೂ ದಿ. ಸಿ.ಬಿ. ಬಡ್ನಿ, ದಿ. ಆರ್.ಎನ್. ದೇಶಪಾಂಡೆ ಅವರು ನಡೆದುಬಂದ ಹಾದಿಯ ಕುರಿತು ವಿಡಿಯೋಗಳು ಮೂಡಿಬಂದವು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಧಾರವಾಡ ಮುರುಘಾಮಠ ಹಾಗೂ ಗವಿಮಠದ ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ ಎಂ.ಡಿ. ಬಟ್ಟೂರ ವಹಿಸಿದ್ದರು. ಉದ್ಘಾಟಕರಾಗಿ ಎಸ್.ಎಂ. ನೀಲಗುಂದ, ಮುಖ್ಯ ಅತಿಥಿಗಳಾಗಿ ಡಾ. ಎಸ್.ಸಿ. ಚವಡಿ, ಬಿ.ಸಿ. ಬಡ್ನಿ, ಎಫ್.ಎಸ್. ಅಮೋಘಿಮಠ, ಎಸ್.ಸಿ. ಕುರ್ತಕೋಟಿ, ವಿಜಯ ನೀಲಗುಂದ, ಕೆ.ಎಲ್. ಕರಿಗೌಡರ, ಪಿ.ಎ. ವಂಟಕರ, ಕಾಲೇಜಿನ ಪ್ರಾಚಾರ್ಯ ಎ.ಎಂ. ಅಂಗಡಿ, ಮುಖ್ಯೋಪಾಧ್ಯಾಯ ಇ.ಎಂ. ಗುಳೇದಗುಡ್ಡ, ಬಿ.ಜಿ. ಯಳವತ್ತಿ, ವಾಯ್.ಎಚ್. ಚಲವಾದಿ, ಎಚ್.ಎಂ. ಮಜ್ಜಿಗುಡ್ಡ, ಎಸ್.ಎಫ್. ಮುದ್ದಿನಗೌಡ್ರ ಸೇರಿದಂತೆ 2001/02ನೇ ಸಾಲಿನ ವಿದ್ಯಾರ್ಥಿಗಳು ಇದ್ದರು.
ಅಧ್ಯಕ್ಷತೆ ವಹಿಸಿದ್ದ ಎಂ.ಡಿ. ಬಟ್ಟೂರ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತವಾದ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಗುರುವಿಗೆ ಮಹತ್ವವಾದ ಪಾತ್ರ ವಹಿಸಿರುತ್ತಾರೆ. ಗುರುವಿನ ಮಾರ್ಗದರ್ಶನದಲ್ಲಿ ಸಾಗಿದಾಗ ಬದುಕು ಹಸನಾಗುತ್ತದೆ ಎಂದರು.



