ವಿಜಯಸಾಕ್ಷಿ ಸುದ್ದಿ, ಹಾವೇರಿ : ಗುರು ಪುಟ್ಟರಾಜರ ಜನ್ಮದಿನವನ್ನು ಸರಕಾರಿಂದ ಆಚರಿಸುವಂತಾಗಬೇಕು ಮತ್ತು ಪಂಡಿತ ಪುಟ್ಟರಾಜರ ಸಮಗ್ರ ಸಾಹಿತ್ಯವನ್ನು ಸರಕಾರವೇ ಪ್ರಕಟಿಸಬೇಕು. ಹಾವೇರಿಯಲ್ಲಿ ಸರ್ಕಾರದಿಂದಲೇ ಕುಮಾರ ಪಂಚಾಕ್ಷರಿ ಪುಟ್ಟರಾಜ ಟ್ರಸ್ಟ್ ಸ್ಥಾಪಿಸಬೇಕಾಗಿದೆ ಎಂದು ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ, ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಸರಕಾರವನ್ನು ಒತ್ತಾಯಿಸಿದರು.
ಅವರು ನಗರದ ಶ್ರೀ ಹುಕ್ಕೇರಿಮಠದ ಅಕ್ಕನ ಬಳಗದ ಅಕ್ಕನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಹಾವೇರಿ ತಾಲೂಕಾ ಘಟಕದ ಉದ್ಘಾಟನೆ ಮತ್ತು ಸೇವಾ ಸಮಿತಿಯ ಪದಾಧಿಕಾರಿಗಳಿಗೆ ಗುರು ಸೇವಾದೀಕ್ಷೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸೇವಾ ಸಮಿತಿಯ ತಾಲೂಕಾಧ್ಯಕ್ಷೆ ಚಂಪಾ ಮಲ್ಲಿಕಾರ್ಜುನ ಹುಣಸಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾವೇರಿ ಜಿಲ್ಲಾಧ್ಯಕ್ಷೆ ಡಾ. ಗೀತಾ ಸುತ್ತಕೋಟೆ, ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದ್ರಾಕ್ಷಾಯಿಣಿ ವಾಲ್ಮಿಕಿ ಮತ್ತು ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ಗೌರವಾಧ್ಯಕ್ಷೆ ಲಲಿತಾಗಂಗಾಧರ ಹೊರಡಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸೇವಾ ಸಮಿತಿಯ ಸಂಸ್ಥಾಪಕರು, ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಗುರುಸೇವಾ ದೀಕ್ಷೆ ನೀಡಿ ಸತ್ಕರಿಸಲಾಯಿತು. ಅಂಧ ಕಲಾವಿದರುಗಳಾದ ಮಂಜುನಾಥ ಕಮ್ಮಾರ, ಸುರೇಶ ಅಂಗಡಿ ಇವರನ್ನು ಸತ್ಕರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ಅಕ್ಕಂದಿರಿಂದ ಮತ್ತು ಸನ್ಮಾನಿತರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಸಹ ಕಾರ್ಯದರ್ಶಿ ಮಮತಾ ಮಾಗಳ ಪ್ರಾರ್ಥನೆ ನಡೆಸಿಕೊಟ್ಟರು.
ಸಮಿತಿಯ ಕೋಶಾಧ್ಯಕ್ಷ ಫಕ್ಕೀರಶಟ್ರು ಎಸ್. ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಖಾ ಬ.ನೆರಳೆಕರ್ ಸ್ವಾಗತಿಸಿದರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪಿ.ಅಕ್ಕಿ. ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಎನ್. ತುಪ್ಪದ ವಂದಿಸಿದರು.
ಸಂಸ್ಕೃತ ಶಿಕ್ಷಕ, ಪ್ರವಚನಕಾರ ಪ್ರಭುಲಿಂಗಯ್ಯ ಆರಾಧ್ಯಮಠ ಹತ್ತಿಮತ್ತೂರು ಮಾತನಾಡಿ, ಹಾನಗಲ್ಲಿನ ಕುಮಾರ ಶಿವಯೋಗಿ, ಕಾಡಶಟ್ಟಿಹಳ್ಳಿಯ ಗಾನಯೋಗಿ ಪಂಚಾಕ್ಷರಿ ಮತ್ತು ದೇವಗಿರಿಯ ಪಂ. ಪುಟ್ಟರಾಜರನ್ನು ಪಡೆದ ಹೆಮ್ಮೆ ಹಾವೇರಿ ಜಿಲ್ಲೆಗೆ ಇದೆ. ಈ ಗುರುತೃಯರ ಸೇವೆಗೆ ಸಲ್ಲಬೇಕಾದ ಗೌರವ ಸರಕಾರದಿಂದ ಸಲ್ಲಲಿ. ಈ ನಿಟ್ಟಿನಲ್ಲಿ ಸೇವಾ ಸಮಿತಿಯು ಕಾರ್ಯ ಪ್ರವೃತ್ತವಾಗಬೇಕು ಎಂದು ಹೇಳಿ, ಪಂಚಾಕ್ಷರಿ ಪುಟ್ಟರಾಜರ ಜೀವನ ಸಾಧನೆಯನ್ನು ಪರಿಚಯಿಸಿದರು.