ವಿಜಯಸಾಕ್ಷಿ ಸುದ್ದಿ, ಸಿಂಧನೂರು : ಆಧುನಿಕ ಯುಗದಲ್ಲಿ ಮನುಷ್ಯ ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದಾನೆ. ಆದರೆ ಮಾನಸಿಕ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಬರಲಾರದಕ್ಕೆ ಈ ಪರಿಸ್ಥಿತಿ ಉಂಟಾಗಿದೆ. ಉಜ್ವಲ ಭವಿಷ್ಯ ಮತ್ತು ಉನ್ನತಿಗಾಗಿ ಮೌಲ್ಯಗಳ ಸಂರಕ್ಷಣೆ ಮತ್ತು ಪರಿಪಾಲನೆ ಅಗತ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಕರಿಬಸವ ನಗರದಲ್ಲಿರುವ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಜರುಗಿದ ಗುರುವಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸುಧಾರಣೆ ಮತ್ತು ವೈಚಾರಿಕತೆ ಹೆಸರಿನಲ್ಲಿ ಸಂಸ್ಕೃತಿ ನಾಶಗೊಳ್ಳಬಾರದು. ಸಂಸ್ಕಾರಯುಕ್ತ ಜೀವನದಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆಯಲು ಸಾಧ್ಯ. ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಯಶಸ್ಸು ನಿಶ್ಚಿತ. ಕಾಯಕವೇ ಕಳಾ ಚೈತನ್ಯ ಎಂದು ರೇಣುಕವಾಣಿ ನಿರೂಪಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರ ದಶ ಧರ್ಮ ಸೂತ್ರಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಶ್ರೀ ಮಠದ ಪರಿಸರದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಲು ಭಕ್ತರು ಸಹಕರಿಸಬೇಕು. ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸೋಮನಾಥ ಶ್ರೀಗಳು ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ನೇತೃತ್ವ ವಹಿಸಿದ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವನಿಗೊಂದು ಗುರಿ ಮತ್ತು ಗುರು ಇರಬೇಕು. ಗುರುವಿಲ್ಲದೇ ಗುರಿ ಮುಟ್ಟಲು ಸಾಧ್ಯವಾಗದು. ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ ಇದೆ ಎಂದರು. ಬಸವರಾಜೇಶ್ವರಿ ಶಾಶ್ವತಸ್ವಾಮಿ ಮುಕ್ಕುಂದಿಮಠ, ಪೂಜಾ ಪಾಟೀಲ, ಶಿವಕುಮಾರ ಜವಳಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು.
ವೀರಶೈವ ಸಮಾಜದ ಅಧ್ಯಕ್ಷ ಪಂಪನಗೌಡ ತಾವರಗೇರಿ ಸ್ವಾಗತಿಸಿದರು. ಅಮರಯ್ಯ-ವೀರೇಶ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ವೈಜನಾಥ ಸಗರಮಠ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.
ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಕಡೇನಂದಿಹಳ್ಳಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹೆಬ್ಬಾಳ ಹಿರೇಮಠದ ಶಿವಪ್ರಕಾಶ ಶರಣರು, ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು, ತಲೇಖಾನ್ ವೀರಭದ್ರ ಶರಣರು ಉಪಸ್ಥಿತರಿದ್ದು ಮಾತನಾಡಿದರು.
Advertisement


