ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಿ, ಅವರು ನೀಡುವ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವಿಗಳಾಗಬೇಕು. ಅಕ್ಷರ ಜ್ಞಾನ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದೆಂದು ಅನ್ನದಾನೇಶ್ವರ ಶಾಖಾ ಮಠ ನರಸಾಪೂರದ ಶ್ರೀ ಡಾ. ವೀರೇಶ್ವರ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.
ಶ್ರೀ ಜಗದ್ಗುರು ಅನ್ನದಾನೇಶ್ವರ ವಿದ್ಯಾಸಮಿತಿ ಪ್ರೌಢಶಾಲೆ ನರಸಾಪೂರದಲ್ಲಿ 1998-2001ನೇ ಸಾಲಿನಲ್ಲಿ ವಿದ್ಯಾಭ್ಯಾಸಗೈದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಎಮ್.ಎಚ್. ಪೂಜಾರ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಅಭ್ಯಾಸಗೈದ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಚಾರ. ಹಳೆಯ ವಿದ್ಯಾರ್ಥಿಗಳು ಶಾಲೆಯ ಉಳಿವಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಕ ಎ.ಎಮ್. ಕೊಟಗಿ ಮಾತನಾಡಿ, ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ನೀವು ಕಲಿತ ಶಾಲೆಯ ಅಭಿವೃದ್ಧಿಗಾಗಿ ಸಹಾಯ, ಸಹಕಾರ ನೀಡಬೇಕೆಂದರು.
ಅತಿಥಿಗಳಾಗಿ ಆಗಮಿಸಿದ್ದ ಆರ್.ಬಿ. ಕೆಂಚಗುAಡಿ, ಕೆ.ಕೆ. ಹೂಗಾರ, ವಿ.ಆರ್. ಹಿರೇಮಠ, ಎಸ್.ಸಿ. ಚಕ್ಕಡಿಮಠ, ಆರ್.ಎ. ಹಣಗಿ, ಜಿ.ಎಫ್. ಹೆರಕಲ್ ಅವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಪ್ರೇಮಾ ಹೂಗಾರ ಸ್ವಾಗತಿಸಿದರು. ವೀರೇಶ ಬಂಡಾ ನಿರೂಪಿಸಿದರು. ಮಂಜುಳಾ ಹೊಂಬಳ ವಂದಿಸಿದರು ಎಂದು ಕ.ರ.ವೇ ಅಧ್ಯಕ್ಷ ಬಸವರಾಜ ಮೇಟಿ ಪ್ರಕಟಣೆಯಲ್ಲಿ ಮೂಲಕ ತಿಳಿಸಿದ್ದಾರೆ.


