ವಿಜಯಸಾಕ್ಷಿ ಸುದ್ದಿ, ರೋಣ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯದು. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಬಾಳು ಬೆಳಗುವ ಗುರುವಿನ ಶ್ರಮ ದೊಡ್ಡದು ಎಂದು ಗದುಗಿನ ವೀರೇಶ್ವರ ಪುಣ್ಯಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಎಸ್.ವಿ. ಪದವಿಪೂರ್ವ ಕಾಲೇಜಿನಲ್ಲಿ 1994-95ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ 1996-97ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಜರುಗಿದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಸಮಾಜದಲ್ಲಿ ಒಳ್ಳೆಯ ಸ್ಥಾನ-ಮಾನ ಪಡೆದಿದ್ದರೆ ಅದರ ಹಿಂದೆ ಪ್ರತಿಯೊಬ್ಬ ಗುರುವಿನ ಶ್ರಮ ಅಡಗಿರುತ್ತದೆ. ಅವರು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯುವ ಮೂಲಕ ಕಟ್ಟಿದ ಜ್ಞಾನದಿಂದಲೇ ನಾವು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು ಎಂದರು.
ವಿಜ್ಞಾನ ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಕುಕು ಹಾಕುವ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇದೀಗ ಅಗತ್ಯವಿದೆ. ಆ ಮೂಲಕ ಈಗಿರುವ ವಿದ್ಯಾರ್ಥಿಗಳಿಗೂ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅನೇಕ ಹಿರಿಯ ವಿದ್ಯಾರ್ಥಿಗಳ ತಮ್ಮ ಅನುಭವವನ್ನು ಹಂಚಿಕೊಂಡರು. ನಿವೃತ್ತ ಪ್ರಾಚಾರ್ಯ ಮೆಣಸಿಗೆ ಗುರುಗಳು, ಶಿಕ್ಷಕ ಐ.ಎಸ್. ಮೇಟಿ, ಎಸ್.ಆರ್. ಬಳಗಾನೂರಮಠ, ಎಂ.ವಿ. ಪೂಜಾರ, ಎ.ಎಂ. ಕೊಣ್ಣೂರ, ಮಂಜುಳಾ ಹೊಸಳ್ಳಿ, ಜ್ಯೋತಿ ಉಗಲಾಟ, ಉಮಾ ಹೊಸಂಗಡಿ, ಜ್ಯೋತಿ ಜಂತ್ಲಿ, ಬಿ.ಬಿ. ರಾಯರೆಡ್ಡಿ, ವಿಜಯಲಕ್ಷ್ಮಿ ಮರಿಗೌಡ್ರ, ಶಿವು ಹೊಸಂಗಡಿ, ಮಂಜು ರಿತ್ತಿ, ವೆಂಕಣ್ಣ ದಾದ್ಮಿ, ಹೇಮರೆಡ್ಡಿ ಹದ್ಲಿ ಇದ್ದರು.
**ಬಾಕ್ಸ್**
ನಿವೃತ್ತ ಪ್ರಾಚಾರ್ಯ ಕೆ.ವೈ. ಕೋರಿ ಮಾತನಾಡಿ, 35 ವರ್ಷಗಳ ನಂತರ ಮಾಡಿರುವ ಈ ಕಾರ್ಯಕ್ರಮ ಮಹಾಸಂಗಮವಾಗಿದೆ. ಇಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ಹಂತದ ಎಲ್ಲರನ್ನು ಒಂದು ಕಡೆ ಸೇರಿಸಿದ್ದು ಶ್ಲಾಘನೀಯ, ಅಷ್ಟೇ ಅಲ್ಲದೆ ವಯೋವೃದ್ಧರನ್ನು ಸನ್ಮಾನಿಸಿದ್ದು ಖುಷಿ ನೀಡಿದೆ ಎಂದರು.