ಅರಿವಿನೆಡೆಗೆ ಕರೆದೊಯ್ಯುವುದೇ ಗುರುವಿನ ಧರ್ಮ : ರಂಭಾಪುರಿ ಶ್ರೀಗಳು

0
rambhapuri
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಮನುಷ್ಯನಲ್ಲಿ ಅರಿವು-ಮರೆವು ಎರಡೂ ಮನೆ ಮಾಡಿವೆ. ಮರೆವು ದೂರ ಮಾಡಿ ಅರಿವು ಉಂಟು ಮಾಡುವುದೇ ಗುರುವಿನ ನಿಜ ಧರ್ಮವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಬುಧವಾರ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ 22ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಸುಖ-ದುಃಖಗಳು ಬರುವುದು ಸಹಜ. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಸಮತೋಲನದಿಂದ ಬಾಳುವುದು ಜೀವನ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜಾತಿ ಜಂಜಡಗಳನ್ನು ಮೀರಿ ಭಾವ ಸಾಮರಸ್ಯ ಸೌಹಾರ್ದತೆಗಾಗಿ ಸದಾ ಶ್ರಮಿಸಿದವರು. ಸಂಸ್ಕಾರದ ಮೂಲಕ ಉತ್ತುಂಗಕ್ಕೇರಲು ಪೂರಕವಾದ ಜೀವನ ಮೌಲ್ಯ ಸೂತ್ರಗಳನ್ನು ಬೋಧಿಸಿದ್ದಾರೆ ಎಂದರು.

ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸುಖವೇ ಬರಲಿ, ಕಷ್ಟಗಳೇ ಬರಲಿ ಯಾವಾಗಲೂ ಸಮಚಿತ್ತದಿಂದ ಬಾಳುವ ಅವಶ್ಯಕತೆಯಿದೆ. ಜಾತಿ-ಜಾತಿಗಳ ಸಂಘರ್ಷ ಉಂಟು ಮಾಡದೇ ಸಾಮರಸ್ಯ-ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಸರ್ವರಿಗೂ ಆಶಾಕಿರಣವಾಗಿವೆ ಎಂದರು.

ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳ ಅಧ್ಯಕ್ಷರಾದ ಇಂದುಮತಿ ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಬೆಂಡಿಗೇರಿ ಮತ್ತು ವಿಶ್ವನಾಥ ಹಿರೇಗೌಡರ ಉಪಸ್ಥಿತರಿದ್ದರು. ಪ್ರಭಾ ಹಿರೇಮಠ ಮತ್ತು ವಾಣಿಶ್ರೀ ನಿರೂಪಿಸಿದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವರು, ಧರ್ಮ, ಸಂಸ್ಕೃತಿ ನಮ್ಮೆಲ್ಲರ ನಂಬಿಗೆಯ ಮೇಲೆ ನಿಂತಿವೆ. ನಂಬಿಗೆ ಇದ್ದಲ್ಲಿ ಫಲ ಕಟ್ಟಿಟ್ಟ ಬುತ್ತಿ. ಶ್ರೀ ಜಗದ್ಗುರು ರೇಣುಕಾಚಾರ್ಯರ ದೂರದರ್ಶಿತ್ವದ ತತ್ವ ಸಿದ್ಧಾಂತಗಳನ್ನು ತಿಳಿದು ಆ ದಾರಿಯಲ್ಲಿ ಮುನ್ನಡೆದರೆ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.

 


Spread the love

LEAVE A REPLY

Please enter your comment!
Please enter your name here