ಹಳೆಯ ಶಿಕ್ಷಕರು 24 ಕ್ಯಾರೆಟ್ ಚಿನ್ನವಿದ್ದಂತೆ

0
Guruvandana program and reunion ceremony
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಗುರುಗಳ ವಾಕ್ಯವನ್ನು ಪಾಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಕ್ಷೇತ್ರದಲ್ಲಿ ಅಮೋಘವಾದ ಸಾಧನೆ ಮಾಡಿ ಈ ಸಮಾಜದಲ್ಲಿ ಗುರುತಿಸಿಕೊಂಡಿದ್ದಾನೆ. ಅಂತಹ ಗುರುಗಳನ್ನು ಗೌರವಿಸುವ ಈ ಗುರುವಂದನಾ ಕಾರ್ಯಕ್ರಮ ಸ್ತುತ್ಯಾರ್ಹವಾಗಿದೆ ಎಂದು ಗದಗ ವಿದ್ಯಾದಾನ ಸಮಿತಿಯ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಡಿ.ಎಲ್. ಪಾಟೀಲ ಅಭಿಪ್ರಾಯಪಟ್ಟರು.

Advertisement

ಇಲ್ಲಿಯ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್. ಪಾಟೀಲ ಪ.ಪೂ ಕಾಲೇಜು ಸಭಾಭವನದಲ್ಲಿ 1978-80ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಬಳಗವು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಪುನರ್ಮಿಲನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಳೆಯ ಶಿಕ್ಷಕರು 24 ಕ್ಯಾರೆಟ್ ಚಿನ್ನವಿದ್ದಂತೆ. ಆ ಕಾಲದ ಶಿಕ್ಷಕರು ತಮ್ಮಲ್ಲಿಯ ವಿದ್ವತ್ತನ್ನು ತಮ್ಮ ಶಿಷ್ಯೆ ಬಳಗಕ್ಕೆ ಧಾರೆ ಎರೆಯಲು ಶ್ರಮಿಸುತ್ತಿದ್ದರು. ಅವರ, ಕಾಳಜಿ, ಪ್ರೀತಿ, ಸಂಬಂಧಗಳು ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದ್ದವು. ಅಂದಿನ ಪ್ರಾಥಮಿಕ, ಮತ್ತು ಪ್ರೌಢಶಾಲೆಯಲ್ಲಿ ಹಾಕಿದ ಭದ್ರ ಬುನಾದಿಯೇ ಇಂದು ತಾವುಗಳೆಲ್ಲರೂ ಉತ್ತಮ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗಿದೆ. ಅವರ ಆದರ್ಶ ಗುಣಗಳೇ ಇಂದು ತಾವೆಲ್ಲರೂ ಸೇರಿ 44 ವರ್ಷದ ನನೆಪನ್ನು ಮತ್ತೆ ಪುನರ್ಮಿಲನ ಆಗುವಂತೆ ಮಾಡಿದ್ದು ತಮ್ಮೆಲ್ಲರ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಕಾರಣರಾದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಜನತಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಐ.ಎನ್. ಕುಂಬಾರ ಮತ್ತು ನಿರ್ದೇಶಕ ವಿ.ವಿ. ಗಂಧದ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದ ಹಿಂದೆ ತಂದೆ-ತಾಯಿ, ಗುರುವಿನ ಪಾತ್ರ ದೊಡ್ಡದಾಗಿದೆ.

ತಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ಭವಿಷ್ಯ ರೂಪಿಸಲು ಕಾರಣರಾದ ಶಿಕ್ಷಕರನ್ನು ಗುರುತಿಸಿ ಗೌರವ ಸಲ್ಲಿಸುವ ಈ ಸಂಪ್ರದಾಯ ಬೆಳೆಯಬೇಕಾಗಿದ್ದು, ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಹಾಯ-ಸಹಕಾರ ನೀಡಿ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ವಿನಂತಿಸಿಕೊಂಡರು.

ಸಂಸ್ಥೆಯ ಉಪಾಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ನಿವೃತ್ತ ಶಿಕ್ಷಕರಾದ ಯು.ಎಸ್. ಬೆಂತೂರ, ವಿ.ಆಯ್. ಬಡಿಗೇರ, ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಪ್ರಾಚಾರ್ಯ ಬಿ.ವಿ. ಪಾಟೀಲ, ನಾಗರಾಜ ಕುಲಕರ್ಣಿ ಮಾತನಾಡಿದರು.

ಪ್ರೇಮಾ ದೇಶಪಾಂಡೆ, ಸಂದ್ಯಾ ಹೆಬಸೂರು ಪ್ರಾರ್ಥಿಸಿದರು. ಅಬ್ದುಲ್‌ರಜಾಕ ಯರಗುಡಿ ಸ್ವಾಗತಿಸಿದರು. ಬಸವರಾಜ ಹಡಗಲಿ ವಂದಿಸಿದರು.

ಪುನರ್ಮಿಲನದ ಸಂತಸದ ಕ್ಷಣ

35ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ತಮ್ಮ ಕಲಿಸಿದ ಶಿಕ್ಷಕರಾದ ವಿ.ಆಯ್. ಬಡಿಗೇರ ಹಾಗೂ ಯು.ಎಸ್. ಬೆಂತೂರ ಅವರನ್ನು ಸನ್ಮಾನಿಸಿ ಗುರು ಕಾಣಿಕೆ ನೀಡಿ ಗೌರವ ಅರ್ಪಿಸಿದ ಕ್ಷಣವು ಎಲ್ಲರಲ್ಲಿಯೂ ಸಂತಸದ ಚಿಲುಮೆ ಉಕ್ಕಿಸಿತು. ಇನ್ನುಳಿದ ಶಿಕ್ಷಕರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಈ ಶಿಕ್ಷಕರನ್ನು ಸ್ಮರಿಸಿ ಅವರಿಗೆ ಒಂದು ನಿಮಿಷ ಮೌನ ಆಚರಿಸಿ ಶೃದ್ಧಾಂಜಲಿ ಮೂಲಕ ಗೌರವ ಸಮರ್ಪಿಸಿದ್ದು ವಿಶೇಷವಾಗಿತ್ತು.

ಅಂದಿನ ವಿದ್ಯಾರ್ಥಿ ಕ್ಷಣಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಕಣ್ಣಲ್ಲಿ ಆನಂದ ಭಾಷ್ಪಗಳು ಉದುರಿದವು. ಒಬ್ಬರಿಗೊಬ್ಬರು ಕೈ ಕುಲಕಿ ಸಂತಸ ಪಟ್ಟರು. ಶಿಕ್ಷಕರ ಕಾಲು ಮುಗಿದು ಧನ್ಯತಾ ಭಾವ ಮೆರೆದರು.


Spread the love

LEAVE A REPLY

Please enter your comment!
Please enter your name here