ವಿಜಯಸಾಕ್ಷಿ ಸುದ್ದಿ, ಹಾನಗಲ್ : ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ವೀರಶೈವ ಲಿಂಗಾಯತ ಸಮುದಾಯದ ಬೇಡಿಕೆಯಿದ್ದು, ಸಂಸದನಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಪಡೆದು ಅತ್ಯಂತ ಪ್ರಮಾಣಿಕವಾಗಿ, ಶ್ರಮವಹಿಸಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಗೇನಹಳ್ಳಿ ಏತ ನೀರಾವರಿ ಯೋಜನೆಯನ್ನು 10-12 ವರ್ಷಗಳ ಹಿಂದೆ ಮಾಡಿದ್ದೆವು. ನಮ್ಮ ನಾಯಕರಾಗಿದ್ದ ಸಿ.ಎಂ. ಉದಾಸಿಯವರು ಏತ ನೀರಾವರಿ ಯೋಜನೆಗಳನ್ನು ಮಾಡಬೇಕೆಂದು ಹೇಳಿದಾಗ ಹಾನಗಲ್‌ನಲ್ಲಿ ಮೂರು ಏತನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಉದಾಸಿಯವರ ಪ್ರಯತ್ನ, ಶ್ರದ್ಧೆಯಿಂದ ಮಾಡಿದ್ದೇವೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದ ಇತ್ತು. ಹೀಗಾಗಿ ಹಾನಗಲ್ ತಾಲೂಕಿನ ಬಹುತೇಕ ಕೆರೆಗಳು ತುಂಬುವಂತಾಗಿದೆ ಎಂದರು.
ಪುಷ್ಪಗಿರಿ ಸಂಸ್ಥೆಯ ಮೂವರು ಪರಮಪೂಜ್ಯರ ಆಶೀರ್ವಾದದಿಂದ ಸಮಾಜ ಕಟ್ಟಲು ಏನೆಲ್ಲ ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆ ನಿಮ್ಮ ಭಕ್ತನಾಗಿ ಸೇವೆ ಮಾಡಲು ನಾನು ಸದಾ ಸಿದ್ಧನಿದ್ದೇನೆ. ನಾನು ಮುಖ್ಯಮಂತ್ರಿ ಇದ್ದಾಗ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ ಮಾಡಿದ್ದೇನೆ. ಅದರಿಂದ ಪ್ರತಿ ಸಂಘಕ್ಕೆ 5 ಲಕ್ಷ ರೂ. ಕೊಡುವ ಕೆಲಸ ಮಾಡಿದೆ. ಕೇಂದ್ರದ ಸಂಜೀವಿನಿ ಯೋಜನೆ ಅಡಿಯಲ್ಲಿ 350 ಕೋಟಿಗೂ ಹೆಚ್ಚು ಅನುದಾನವನ್ನು ಪ್ರತಿ ಸಂಘಕ್ಕೂ ಒಂದು ಲಕ್ಷದಂತೆ ನೀಡಿದ್ದೇವೆ. ಮಹಿಳಾ ಸ್ವಸಹಾಯ ಸಂಘಕ್ಕೆ ಏನಾದರೂ ಸಹಾಯ ಬೇಕಾದರೆ ನಿಮ್ಮ ಒಬ್ಬ ಸಹೋದರ ನಿಮ್ಮ ಜೊತೆಗೆ ಇದ್ದಾನೆ ಎಂದು ಭಾವಿಸಿ ನಿಮ್ಮ ಕೆಲಸ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪುಷ್ಪಗಿರಿ ಸಂಸ್ಥಾನ ಮಠದ ಪರಮಪೂಜ್ಯರಾದ ಶ್ರೀ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಹೋತನಹಳ್ಳಿಯ ಸಿದ್ದಾರೂಢ ಮಠದ ಪರಮಪೂಜ್ಯರಾದ ಶ್ರೀ ಶಂಕರಾನಂದ ಸ್ವಾಮೀಜಿ, ಹರಿಹರ ತಾಲೂಕಿನ ಸಿದ್ದಾಶ್ರಮದ ಪರಮಪೂಜ್ಯರಾದ ಶ್ರೀ ಯೋಗಾನಂದ ಸ್ವಾಮೀಜಿ ಸೇರಿದಂತೆ ಮಾಜಿ ಶಾಸಕರಾದ ಶಿವರಾಜ ಸಜ್ಜನ, ಮುಖಂಡರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ರಾಜಶೇಖರ ಕಟ್ಟೇಗೌಡ್ರ, ಶಿವಲಿಂಗಪ್ಪ ತಲ್ಲೂರ, ಬಿ.ಎಸ್. ದಳವಾಯಿ ಮುಂತಾದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಗುರುಗಳು ಆಜ್ಞೆ ಮಾಡಿದಂತೆ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 25 ಲಕ್ಷ ರೂ. ಅನುದಾನ ನೀಡಲಾಗುವುದು. ಅಲ್ಲದೇ ನಮ್ಮ ಸ್ವಂತ ಟ್ರಸ್ಟ್ನಿಂದ ತಾವು ಮಾಡುವ ಕೆಲಸಕ್ಕೆ ಹಾವೇರಿ ಜಿಲ್ಲೆಯ ಯಾವ ತಾಲೂಕಿನಲ್ಲಿ ಪ್ರತಿ ತಾಲೂಕಿಗೂ ಗ್ರಾಮೀಣಾಭಿವೃದ್ಧಿ ಸಂಘಗಳಿಗೆ 10 ಲಕ್ಷ ರೂ. ನೀಡಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.