ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನದ ರೂವಾರಿಯಾಗಿ ಶಾಲೆಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗುವಂತೆ ಮಾಡಿದ ಕೀರ್ತಿ ನಿರ್ದೇಶಕ ದಿ. ಎಚ್.ಸಿ. ರಟಗೇರಿಯವರಿಗೆ ಸಲ್ಲುತ್ತದೆ. ಎಚ್.ಸಿ. ರಟಗೇರಿಯವರು 1996ರಲ್ಲಿ ನಿವೃತ್ತಿ ಹೊಂದಿದ್ದು, ಟಿ.ಈಶ್ವರ ಅವರು ಲಕ್ಷ್ಮೇಶ್ವರದಲ್ಲಿ 2003ರಲ್ಲಿ ಸ್ಕೂಲ್ ಚಂದನ ಸಿಬಿಎಸ್‌ಸಿ ಶಾಲೆ ಪ್ರಾರಂಭಿಸಲು ಮುನ್ನುಡಿ ಬರೆದರು. 89ರ ಇಳಿವಯಸ್ಸಿನಲ್ಲಿಯೂ ಸೇರಿ ಒಟ್ಟು 22 ವರ್ಷಗಳ ಕಾಲ ಯಾವುದೇ ವೇತನ, ಗೌರವಧನ ಪಡೆಯದೆ ಗೌರವ ನಿರ್ದೇಶಕರ ಜೊತೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದರು.
ರಟಗೇರಿಯವರು ಇದೇ ವರ್ಷ ಅ. 20ರಂದು ಇಹಲೋಕ ತ್ಯಜಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಜೊತೆ ಚಂದನ ಸ್ಕೂಲ್‌ಗೆ ತುಂಬಲಾರದ ನಷ್ಟ. ಇಂತಹ ಮಹಾನ್ ವ್ಯಕ್ತಿಯಿಂದ ಬೆಳೆದು ನಿಂತ ಚಂದನ ಶಾಲೆಯ ಅಧ್ಯಕ್ಷರಾದಿಯಾಗಿ ಮಕ್ಕಳ ಮನದಲ್ಲಿ ನೆಲೆ ನಿಂತಿದ್ದು, ಅವರ ಸವಿನೆನಪಿಗಾಗಿ ಶಾಲೆಯ ಆವರಣದಲ್ಲಿ ದಿ. ಎಚ್.ಸಿ. ರಟಗೇರಿ ಅವರ ಕಂಚಿನ ಪುತ್ಥಳಿ ಸ್ಥಾಪಿಸುವ ಮೂಲಕ ಚಂದನ ಸಂಸ್ಥೆ ಗೌರವ ಸಮರ್ಪಿಸಿದೆ.
ಶನಿವಾರ ಶಾಲೆಯ ಆವರಣದಲ್ಲಿ ಸಿಎನ್‌ಆರ್ ರಾವ್ ಅವರ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ದಶಮಾನೋತ್ಸವ ಸಮಾರಂಭಕ್ಕೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿ. ಎಚ್.ಸಿ. ರಟಗೇರಿಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ, ದಿವಂಗತರ ಗುಣಗಾನ ಮಾಡಿದರು.



