ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಲಿಂ. ಗುರು ಅನ್ನದಾನ ಸ್ವಾಮಿಗಳ 48ನೇ ಪುಣ್ಯಸ್ಮರಣೋತ್ಸವ, ಉಡಿ ತುಂಬುವ ಸಮಾರಂಭ, `ಮರಳಿ ಮಣ್ಣಿಗೆ’ ಜನಜಾಗೃತಿ ಕಾರ್ಯಕ್ರಮ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮವು ಸೋಮವಾರ ಸಂಜೆ ವೈಭವಯುತವಾಗಿ ನೆರವೇರಿತು.
ಹಾಲಕೆರೆ ಕ್ಷೇತ್ರಕ್ಕೆ ಆಗಮಿಸಿದ್ದ ಎಲ್ಲ ಹರ-ಗುರು-ಚರ ಮೂರ್ತಿಗಳು ಹಾಗೂ ಹಾಲಕೆರೆ ಸಂಸ್ಥಾನ ಮಠದ ಪೀಠಾಧೀಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳ್ಳಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ನಂತರ ಸಂಜೆ 6ಕ್ಕೆ ಮಹಿಳೆಯರು, ವಿದ್ಯಾರ್ಥಿನಿಯರು ಜಯಘೋಷಗಳನ್ನು ಕೂಗುತ್ತ ಬೆಳ್ಳಿ ತೇರನ್ನು ಎಳೆದು ಸಂಭ್ರಮಿಸಿದರು.
ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಚಪ್ಪಾಳೆ ತಟ್ಟಿದ ಭಕ್ತರು ಭಕ್ತಿಭಾವ ಮೆರೆದರು. ಮಹಿಳೆಯರು ಭಕ್ತಿ, ಶ್ರದ್ಧೆಯಿಂದ ತೇರಿಗೆ ಪುಷ್ಪ ಎರಚುವ ಮೂಲಕ ಸಂಭ್ರಮದಿಂದ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟ, ವಿಜಯನಗರ, ಬಳ್ಳಾರಿ, ರಾಯಚೂರು, ದಾವಣಗೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.