ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಹ್ಯಾಮ್ ಎಂಬುದು ರೇಡಿಯೊ ಆಧಾರಿತ ಸಂಪರ್ಕ ತಂತ್ರಜ್ಞಾನವಾಗಿದ್ದು, ಭೂಕಂಪ, ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಅರಣ್ಯ ಪ್ರದೇಶ, ಸಮುದ್ರ, ಆಕಾಶದಲ್ಲಿನ ಅವಘಡದ ತುರ್ತು ಸಂದರ್ಭದಲ್ಲಿ ಮೋಬೈಲ್‌ನಂತಹ ಇತರೇ ಸಂಪರ್ಕ ಸಾಧನಗಳು ಕಾರ್ಯನಿರ್ವಹಿಸದೇ ಇದ್ದಾಗ ಹ್ಯಾಮ್‌ಗಳು ನಿರ್ದಿಷ್ಟ ತರಾಂಗತರದಲ್ಲಿ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಮ್ ಸಂಸ್ಥೆಯ ನಿರ್ದೇಶಕ ಡಾ. ಎಸ್.ಸತ್ಯಪಾಲ್ ಹೇಳಿದರು.
ಅವರು ಸೋಮವಾರ ಸಮೀಪದ ಒಡೆಯರ ಮಲ್ಲಾಪುರ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಹ್ಯಾಮ್ ತಂತ್ರಜ್ಞಾನದ ಬಗ್ಗೆ ವಿವರಿಸಿ ಮಾತನಾಡಿದರು.
ಕೇಂದ್ರ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಪರವಾನಗಿಯೊಂದಿಗೆ ರಾಜ್ಯ ಸರಕಾರದ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಹ್ಯಾಮ್ ಬಳಸಲು ಮೊದಲಿಗೆ ಲೈಸನ್ಸ್ ಪಡೆಯಬೇಕಾಗುತ್ತದೆ. ಲೈಸನ್ಸ್ ಪಡೆದುಕೊಂಡವರಿಗೆ ಕೋಡ್‌ವರ್ಡ್ ನೀಡಲಾಗುವುದು. ಈ ಕೋಡ್‌ವರ್ಡ್ ಮೂಲಕ ಇತರ ದೇಶಗಳಲ್ಲಿರುವ ಸಾಧಕರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಅಗತ್ಯ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಸಂಬಂಧಿತ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಮಕ್ಕಳ ಶಿಕ್ಷಣದಲ್ಲಿ ಹ್ಯಾಮ್ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವಿಭಾಗದ ಹಿರಿಯ ಇಂಜಿನಿಯರ್ ಮಹಾದೇವ ಮಾತನಾಡಿ, ಬೋಧನೆ ಮತ್ತು ಕಲಿಕೆಯಲ್ಲಿ ಹ್ಯಾಮ್ ತಂತ್ರಜ್ಞಾನದ ಬಳಕೆ ಮಕ್ಕಳಿಗೆ ಪಾಠ ಕಲಿಯಲು ಸುಲಭವಾಗಲಿದೆ. ಹ್ಯಾಮ್ ತಂತ್ರಜ್ಞಾನದ ಸೌಲಭ್ಯಗಳ ಬಳಕೆಯಿಂದ ಕಲಿಕೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಪ್ರೇರಣೆಯನ್ನು ಹೆಚ್ಚಿಸುತ್ತದೆ. ಹ್ಯಾಮ್ ತಂತ್ರಜ್ಞಾನದ ಬಳಕೆಯಿಂದ ಇಂದು ಸಂವಹನ ಅತ್ಯಂತ ಸುಲಭವಾಗಿದೆ. ಹ್ಯಾಮ್ ಎಂಬ ರೇಡಿಯೊ ಆಧಾರಿತ ಸಂಪರ್ಕ ತಂತ್ರಜ್ಞಾನದ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ವಸತಿ ಶಾಲೆಗಳಲ್ಲಿ ಹ್ಯಾಮ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದರು.
ಈ ವೇಳೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಜಂಟಿ ನಿರ್ದೇಶಕ ವೆಂಕಟ್, ಪ್ರಾಚಾರ್ಯರು, ಶಿಕ್ಷಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹ್ಯಾಮ್ ತಂತ್ರಜ್ಞಾನ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದ ವಿಜ್ಞಾನ ಶಿಕ್ಷಕಿ ಎಂ.ಆಯ್. ಡಂಬಳ ಮಾತನಾಡಿ, ಮಕ್ಕಳಲ್ಲಿ ತಂತ್ರಜ್ಞಾನದ ಜ್ಞಾನ ಬೆಳೆಸಲು ಹ್ಯಾಮ್ ಸಹಕಾರಿಯಾಗಲಿದೆ. ಪೊಲೀಸ್ ಇಲಾಖೆಯಲ್ಲಿ ಬಳಸುವಂತಹ 6 ವಾಕಿಟಾಕಿಗಳುಳ್ಳ ಹ್ಯಾಮ್ ತಂತ್ರಜ್ಞಾನದ ಉಪಕರಣ ನಮ್ಮ ಶಾಲೆಯಲ್ಲಿ ಅಳವಡಿಸಿರುವುದು ಸಂತಸ ತಂದಿದೆ ಎಂದರು.