ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಸ್ವಚ್ಛತೆಯ ವಿಚಾರದಲ್ಲಿ ಪುರಸಭೆಯ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ದೂರು, ಆರೋಪಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪೌರ ಕಾರ್ಮಿಕರಿಂದ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಈ ಕುರಿತು ಮಂಗಳವಾರ ಪಟ್ಟಣದ ಪುರಸಭೆಯಲ್ಲಿ ಅಧಿಕಾರಿಗಳು ಮತ್ತು ಪೌರಕಾರ್ಮಿಕರೊಂದಿಗೆ ಚರ್ಚೆ ನಡೆಸಿದರು.
ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಮಾತನಾಡಿ, ಪೌರ ಕಾರ್ಮಿಕರ ಕೊರತೆ ಸಾಕಷ್ಟಿದೆ. ಕಸವಿಲೇವಾರಿ ವಾಹನಗಳು ದುರಸ್ತಿಗೊಳಗಾಗಿವೆ. ಇನ್ನೂ ಹಲವು ಕಾರಣಗಳಿಂದ ಸ್ವಚ್ಛತಾ ಕಾರ್ಯ ನಿಭಾಯಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಕಾರಣ ತಿಳಿಸಿದರು.
ಎಲ್ಲವನ್ನೂ ಆಲಿಸಿದ ಶಾಸಕರು, ಇದ್ದ ಸಿಬ್ಬಂದಿಯನ್ನೇ ಬಳಸಿಕೊಂಡು ಅವರಿಗೆ ವಾರ್ಡ್ವಾರು ಕೆಲಸ ಹಂಚಿಕೊಡಬೇಕು. ಸರಿಯಾಗಿ ಕೆಲಸ ಮಾಡದವರಿಗೆ ಎಚ್ಚರಿಕೆ ನೀಡಿ. ಆದಾಗ್ಯೂ ಸುಧಾರಿಸಿಕೊಳ್ಳದಿದ್ದರೆ ಕೆಲಸ ಮಾಡುವ ಬೇರೆಯವರಿಗೆ ಅವಕಾಶ ಕೊಡೋಣ. ಮುಂದೆ ಇನ್ನಷ್ಟು ಗುತ್ತಿಗೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಪ್ರಯತ್ನಿಸೋಣ. ಪೌರ ಕಾರ್ಮಿಕರಿಗೆ ಕೆಲಸದ ಕಿಟ್, ಸಾಮಗ್ರಿ, ಉಪಹಾರ, ಆರೋಗ್ಯ ಚಿಕಿತ್ಸೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ. ಪೌರ ಕಾರ್ಮಿಕರೂ ಸಹ ಪಟ್ಟಣದ ಸ್ವಚ್ಛತೆಗೆ ಪ್ರಾಮಾಣಿಕ ಕಾರ್ಯ ಮಾಡಬೇಕು. ಪಟ್ಟಣದಲ್ಲಿ ಖಾಲಿ ಇರುವ ನಿವೇಶನಗಳ ಸ್ವಚ್ಛತೆಗೆ ನಿವೇಶನ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ. ಅನಧಿಕೃತ ಬ್ಯಾನರ್‌ಗಳ ಮೇಲೆ ನಿಯಂತ್ರಣ ಹೇರಿ. ಪುರಸಭೆ ಕರ ಬಾಕಿ ವಸೂಲಿ ಕಾರ್ಯ ನಿಭಾಯಿಸಿ, ಆರ್ಥಿಕ ಮುಗ್ಗಟ್ಟು ತಪ್ಪಿಸಿ ಎಂದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಗಂಗಾಧರ ಮೆಣಸಿನಕಾಯಿ, ಬಸವಣ್ಣೆಪ್ಪ ನಂದೆಣ್ಣವರ, ವಿಜಯ ಕುಂಬಾರ ಸಮಸ್ಯೆ ನಿವಾರಣೆಯ ಬಗ್ಗೆ ಕೆಲ ಸಲಹೆ-ಸೂಚನೆಗಳನ್ನು ನೀಡಿದರು. ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ಅಧಿಕಾರಿಗಳಾದ ಶೋಭಾ ಬೆಳ್ಳಿಕೊಪ್ಪ, ಮಂಜುಳಾ ಹೂಗಾರ ಮತ್ತಿತರರಿದ್ದರು.


