ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿಯ ಮಾರುತಿ ನಗರದ ರಿ.ಸ ನಂ 294/4ರ ಜಮೀನಿನಲ್ಲಿ ರಚನೆ ಮಾಡಿದ 30*40 ಅಳತೆಯ ಆಶ್ರಯ ಯೋಜನೆಯ ನಿವೇಶನಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು.
ನಿವೇಶನವನ್ನು ಹಸ್ತಾಂತರ ಮಾಡಿದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಹಲವಾರು ವರ್ಷಗಳಿಂದ ಹಲವು ಸಮಸ್ಯೆಗಳಿಂದ ನಿವೇಶನ ಹಂಚಿಕೆ ನೆನೆಗುದಿಗೆ ಬಿದ್ದಿತ್ತು. ಬಡವರಿಗೆ ನಿವೇಶನ ಹಂಚಿಕೆ ಮಾಡುವ ಇಂದು ಕಾಲ ಕೂಡಿ ಬಂದಿದೆ. ಶೀಘ್ರವಾಗಿ ಈ ಪ್ರದೇಶಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲಾಗುವುದು. ಈ ನಿವೇಶನವನ್ನು ಒದಗಿಸಲು ಕಳೆದ 20 ವರ್ಷಗಳಿಂದ ಶ್ರಮಿಸಿದ ಸಚಿವರು, ಶಾಸಕರು, ಜಿ.ಪಂ/ತಾ.ಪಂ ಮಾಜಿ ಸದಸ್ಯರು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ 38 ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಫಲಾನುಭವಿ ನಾಗಮ್ಮ ಹಾಲಿನವರ ಮಾತನಾಡಿ, ಕಳೆದ ಐದು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಇಂದು ಯಶ ಸಿಕ್ಕಿದೆ. ಉಳಿದ ಕೆಲವು ಫಲಾನುಭವಿಗಳಿಗೆ ಶೀಘ್ರವೇ ಹಕ್ಕುಪತ್ರ ದೊರಕಿಸಿಕೊಡಬೇಕು. ರಸ್ತೆ, ಕುಡಿಯುವ ನೀರು, ವಿದ್ಯುತ್ ಒದಗಿಸುವ ಕಾಮಗಾರಿ ಮಾಡಬೇಕೆಂದು ವಿನಂತಿಸಿಕೊಂಡರು.
ಗ್ರಾ.ಪಂ ಸದಸ್ಯರಾದ ಪೀರಸಾಬ ನದಾಫ, ಕುಬೇರಪ್ಪ ಬೆಂತೂರ, ಲಲಿತಾ ಗದಗಿನ ಮಾತನಾಡಿದರು. ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಪಿ.ಡಿ.ಒ ರಾಜಕುಮಾರ ಭಜಂತ್ರಿ, ಕಾರ್ಯದರ್ಶಿ ಪ್ರದೀಪ ಆಲೂರ, ಲೆಕ್ಕ ಸಹಾಯಕ ತುಕಾರಾಮ ಹುಲಗಣ್ಣವರ, ತಾ.ಪಂ ವಸತಿ ನೋಡೆಲ್ ಅಧಿಕಾರಿ ಹನುಮಂತಪ್ಪ ದಾಸರ, ಗ್ರಾ.ಪಂ ಸದಸ್ಯರು ಹಾಜರಿದ್ದರು.