ವಿಜಯಸಾಕ್ಷಿ ಸುದ್ದಿ, ಗದಗ: ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಬಂಜಾರಾ ಸಮುದಾಯದ ೧೧ ವರ್ಷದ ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಶಾಲಾ ಮುಖ್ಯಸ್ಮ ಹಾಜಿಮಲ್ಲಂಗ್ ಗಣಿಯಾರನಿಗೆ ವಿಶೇಷ ನ್ಯಾಯಾಲಯದ ಮೂಲಕ ಗಲ್ಲು ಶಿಕ್ಷೆ ನೀಡಬೇಕು. ಇಂತಹ ಹೇಯ ಕೃತ್ಯವನ್ನು ಶಾಲಾ ಮುಖ್ಯಸ್ಥನೇ ಎಸಗಿರುವುದು ಖಂಡನೀಯವಾಗಿದೆ ಎಂದು ಬಂಜಾರ ಸಮುದಾಯದ ಮುಖಂಡರಾದ ಐ.ಎಸ್. ಪೂಜಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಏನೂ ಅರಿಯದ ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಶಾಲಾ ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡಬೇಕು. ರಾಜ್ಯದಲ್ಲಿ ಮುಗ್ಧ ಬಾಲಕಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಭಯ ಹುಟ್ಟುವಂತಹ ಕಠಿಣ ಕಾನೂನು ಜಾರಿಗೆ ತರಬೇಕು ಮತ್ತು ಆರು ತಿಂಗಳಲ್ಲಿ ಶಿಕ್ಷೆ ನೀಡುವ ವ್ಯವಸ್ಥೆ ಆಗಬೇಕು. ಈ ಪ್ರಕರಣದಿಂದ ಆಘಾತಗೊಂಡ ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಅವರು ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳನ್ನು ಒತ್ತಾಯಿಸಿದ್ದಾರೆ.